prahalad joshi ಹಳೇ ಹುಬ್ಬಳ್ಳಿಯ ಶ್ರೀ ಭವಾನಿಶಂಕರ ದೇವಸ್ಥಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶನಿವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಹುಬ್ಬಳ್ಳಿ: ಪುರತತ್ವ ಸಂರಕ್ಷಣಾ ನಿಯಮ ಉಲ್ಲಂಘಿಸಿ ರಸ್ತೆ
ನಿರ್ಮಿಸಲಾಗಿದೆ. ಶ್ರೀ ಭವಾನಿಶಂಕರ ಮತ್ತು ನಾರಾಯಣ ದೇವಸ್ಥಾನ ಪುಷ್ಕರಣಿ ಸಂರಕ್ಷಣಾ ಸಮಿತಿ ರಚಿಸಿದ್ದು, ಈ ಮೂಲಕ ಕಾನೂನು ಸಹಿತ ಎಲ್ಲ ರೀತಿಯ ಹೋರಾಟಗಳು ಮುಂದುವರಿಯಲಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ ನೀಡಿದರು.
ಹಳೇ ಹುಬ್ಬಳ್ಳಿಯ ಶ್ರೀ ಭವಾನಿಶಂಕರ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರಿಂದ ಮಾಹಿತಿ ಪಡೆದರು. ಅಸಮರ್ಪಕ ಮಾಹಿತಿ ಹಿನ್ನೆಲೆಯಲ್ಲಿ ಘಾಳಿ ಅವರನ್ನು ತರಾಟೆಗೆ ತೆಗೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ದೇವಸ್ಥಾನದ 100 ಮೀಟರ್ ವ್ಯಾಪ್ತಿಯಲ್ಲಿ ಪಾಲಿಕೆ ರಸ್ತೆ ನಿರ್ಮಿಸಿರುವುದು ತಪ್ಪು. ದೇವಸ್ಥಾನದ ಆವರಣದಲ್ಲಿ ಪುಷ್ಕರಣಿ ಇರುವುದರ ಕುರಿತು ದಾಖಲೆಗಳಲ್ಲಿಯೇ ಉಲ್ಲೇಖವಿದೆ. ಈ ಕುರಿತು ಸಮಗ್ರ ಉತ್ಖನನ ನಡೆಸಿ ಸತ್ಯಾಸತ್ಯತೆ ಪತ್ತೆ ಮಾಡಲಾಗುವುದು ಎಂದರು.
2023ರಲ್ಲಿ ಅಧಿಕಾರಿಗಳು ನೀಡಿರುವ ವರದಿಯಲ್ಲಿ ಪುಷ್ಕರಣಿ ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ಹೇಳಲಾಗಿದೆ. ಆದರೆ, ದೇವಸ್ಥಾನದ 100 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಬಾರದು ಎಂಬ ಅಂಶವೂ ವರದಿಯಲ್ಲಿದೆ. ಬಾಂಬೆ ಗೆಜೆಟಿಯರ್ ಸೇರಿದಂತೆ ವಿವಿಧ ದಾಖಲೆಗಳಲ್ಲಿ ಪುಷ್ಕರಣಿ ಇರುವುದರ ಉಲ್ಲೇಖವಿದೆ. ಹೀಗಾಗಿ ಸಮಗ್ರ ಉತ್ಖನನ ನಡೆಸಿದರೆ ವಾಸ್ತವಾಂಶ ತಿಳಿಯಲಿದೆ ಎಂದರು.
ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳ ಜತೆಗೆ ದೇಶದ ತಜ್ಞರು, ಪುರಾತತ್ವ ಅಧಿಕಾರಿಗಳನ್ನು ಒಳಗೊಂಡ ಸ್ವತಂತ್ರ ತಂಡದಿಂದ ಉತ್ಖನನ ಹಾಗೂ ಸಂಪೂರ್ಣ ವಿಡಿಯೋ ದಾಖಲೀಕರಣ ನಡೆಸಬೇಕು. ಈ ಕುರಿತು ಶ್ರೀ ಭವಾನಿಶಂಕರ ನಾರಾಯಣ ದೇವಸ್ಥಾನ ಪುಷ್ಕರಣಿ ಸಂರಕ್ಷಣಾ ಸಮಿತಿಯವರು ಶೀಘ್ರ ಅರ್ಜಿ ಸಲ್ಲಿಸಬೇಕು. ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ದೇವಸ್ಥಾನ ಸಂರಕ್ಷಣೆಗೆ ಪ್ರತಿಭಟನೆ ಮುಂದುವರಿಯಲಿದೆ. ಆದರೆ, ಹೋರಾಟ ಶಾಂತಿಯುತವಾಗಿರಬೇಕು. ರಸ್ತೆ ತೆರವು ಸೇರಿದಂತೆ ಮುಂದಿನ ಕ್ರಮವನ್ನು ಸಮಿತಿಯವರು ನಿರ್ಧರಿಸಲಿದ್ದಾರೆ. ಪಾಲಿಕೆ ಅಧಿಕಾರಿಗಳು ಸ್ಥಳೀಯರಿಗೆ ಮೂಲಸೌಕರ್ಯ ಕಲ್ಪಿಸುವ ನೆಪದಲ್ಲಿ ಪುರಾತನ ದೇವಸ್ಥಾನದ ಸಂರಕ್ಷಣಾ ನಿಯಮ ಉಲ್ಲಂಘಿಸಬಾರದು. ಕಾಮಗಾರಿ ನಡೆಸುವ ಮುನ್ನ ಕಾನೂನು ತೊಡಕುಗಳ ಬಗ್ಗೆ ಪರಿಶೀಲಿಸಬೇಕಿತ್ತು. ತಪ್ಪು ಮಾಡಿದ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕಾಂಗ್ರೆಸ್ ಸರ್ಕಾರ ಹೇಳಿದಂತೆ ಅಧಿಕಾರಿಗಳು ಕೇಳುತ್ತಿದ್ದಾರೆ. ಈ ಸರ್ಕಾರ ಮುಸ್ಲಿಂ ತುಷ್ಟೀಕರಣ ನೀತಿಗೆ ಜೋತು ಬಿದ್ದಿದೆ ಎಂದು ಛೇಡಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಎಂಎಲ್‌ಸಿ ನಾಗರಾಜ ಛಬ್ಬಿ, ಮುಖಂಡರಾದ ಹರಿಓಂ ಸುಧಾಕರ ಶೆಟ್ಟಿ, ಜಯತೀರ್ಥ ಕಟ್ಟಿ, ಸಂತೋಷ ಚವ್ಹಾಣ, ಪ್ರೀತಂ ಅರಕೇರಿ, ದತ್ತಮೂರ್ತಿ ಕುಲಕರ್ಣಿ ಇತರಿದ್ದರು.