ಎಸ್ಎಸ್ಎಲ್ಸಿ (Polytechnic) ನಂತರ ತಾಂತ್ರಿಕ ಶಿಕ್ಷಣ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರಕ್ಕೆ ಮತ್ತೊಂದು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಮಂಜೂರು ಮಾಡಬೇಕು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಸರ್ಕಾರವನ್ನು ಒತ್ತಾಯಿಸಿದರು.
ವಿಧಾನಸಭೆಯ ಕಲಾಪದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಅವರು, ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ 109 ಸರ್ಕಾರಿ, 43 ಅನುದಾನಿತ ಹಾಗೂ 135 ಖಾಸಗಿ ಪಾಲಿಟೆಕ್ನಿಕ್ಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 72,057 ಸೀಟುಗಳಿಗೆ ಅವಕಾಶವಿದ್ದು, 46,136 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 25,921 ಸೀಟುಗಳು ಖಾಲಿ ಉಳಿದಿವೆ ಎಂದು ಉನ್ನತ ಶಿಕ್ಷಣ ಸಚಿವರು ನೀಡಿರುವ ಮಾಹಿತಿಯನ್ನು ಉಲ್ಲೇಖಿಸಿದರು.
ಹುಬ್ಬಳ್ಳಿ ನಗರದಲ್ಲಿ ಪ್ರಸಕ್ತ ಸಾಲಿನಲ್ಲಿ 5,106 ವಿದ್ಯಾರ್ಥಿಗಳು ಹಾಗೂ 4,813 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 9,923 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಉತ್ತೀರ್ಣರಾಗಿದ್ದಾರೆ. ಶಿಕ್ಷಣ ವ್ಯವಸ್ಥೆ ವಾಣಿಜ್ಯೀಕರಣಗೊಳ್ಳುತ್ತಿರುವುದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ಉನ್ನತ ಹಾಗೂ ತಾಂತ್ರಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸ್ಥಳೀಯವಾಗಿಯೇ ತಾಂತ್ರಿಕ ಶಿಕ್ಷಣದ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು ಅಬ್ಬಯ್ಯ ಹೇಳಿದರು.
ಹುಬ್ಬಳ್ಳಿಯ ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ 300 ಸೀಟುಗಳಿಗೆ ಅವಕಾಶವಿದ್ದರೂ 650ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಮತ್ತೊಂದು ಪಾಲಿಟೆಕ್ನಿಕ್ನಲ್ಲಿ 250 ಸೀಟುಗಳಿದ್ದು, ಸುಮಾರು 750 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶಗಳು ಹಾಗೂ ಅನ್ಯ ಜಿಲ್ಲೆಗಳ ಪಾಲಿಟೆಕ್ನಿಕ್ಗಳಲ್ಲಿ ಸೀಟುಗಳು ಖಾಲಿ ಇದ್ದರೂ, ಹುಬ್ಬಳ್ಳಿ ನಗರದ ಹೆಣ್ಣುಮಕ್ಕಳನ್ನು ದೂರದ ಪ್ರದೇಶಗಳಿಗೆ ಕಳುಹಿಸಿ ಶಿಕ್ಷಣ ಕೊಡಿಸಲು ಪಾಲಕರು ಹಿಂದೇಟು ಹಾಕುತ್ತಾರೆ. ಹಾಗಾಗಿ ಹುಬ್ಬಳ್ಳಿ ಪೂರ್ವ ಕ್ಷೇತ್ರದಲ್ಲಿ ಪ್ರತ್ಯೇಕ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡಬೇಕು ಎಂದು ಶಾಸಕ ಅಬ್ಬಯ್ಯ ಆಗ್ರಹಿಸಿದರು.
ಶಾಸಕರ ಬೇಡಿಕೆಗೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಹುಬ್ಬಳ್ಳಿಯಲ್ಲಿ ಪಾಲಿಟೆಕ್ನಿಕ್ ಶಿಕ್ಷಣಕ್ಕೆ ಎಷ್ಟು ಸೀಟುಗಳ ಬೇಡಿಕೆಯಿದೆ ಹಾಗೂ ಪ್ರಸ್ತುತ ಎಷ್ಟು ಸೀಟುಗಳು ಲಭ್ಯವಿವೆ ಎಂಬುದರ ಕುರಿತು ಸಮಗ್ರ ಮಾಹಿತಿ ತರಿಸಿಕೊಂಡು, ಅದರ ಆಧಾರದ ಮೇಲೆ ಹೊಸ ಕಾಲೇಜು ಮಂಜೂರು ಮಾಡುವ ಕುರಿತು ಪರಿಶೀಲಿಸಲಾಗುವುದು ಎಂದು ವಿಧಾನಸಭೆಯಲ್ಲಿ ಭರವಸೆ ನೀಡಿದರು.