industries ಹುಬ್ಬಳ್ಳಿಯ ಕೆಸಿಸಿಐನಲ್ಲಿ ಆಯೋಜಿಸಿದ್ದ ಇನ್ಕಾಮೆಕ್ಸ್ ಪೂರ್ವಭಾವಿ ಸಭೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು.
- ಇನ್ಕಾಮೆಕ್ಸ್ ಪೂರ್ವಭಾವಿ ಸಭೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಬೇಸರ.
- ಕೈಗಾರಿಕೆಗಳೆಲ್ಲ ಬೆಂಗಳೂರು ಕೇಂದ್ರೀಕೃತವಾಗಿವೆ.
- ಮೂಲ ಸೌಲಭ್ಯಗಳನ್ನು ಒದಗಿಸುವ ಕಾರ್ಯವಾಗಬೇಕು.
ಇಲ್ಲಿನ ಅಮರಗೋಳದ ಎಪಿಎಂಸಿ ಯಾರ್ಡ್ನ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದಲ್ಲಿ ಏ. 25 ರಿಂದ 29ರವರೆಗೆ ಇನ್ಕಾಮೆಕ್ಸ್-2026 ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ)ಯಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ, ಅವರು ಮಾತನಾಡಿದರು.
1983ರಿಂದ ಇದುವರೆಗೆ ಉತ್ತರ ಕರ್ನಾಟಕ ಭಾಗದವರೇ ಹೆಚ್ಚಿನವರು ಕೈಗಾರಿಕೆ ಸಚಿವರಾಗಿದ್ದಾರೆ. ಆದರೂ, ಈ ಭಾಗಕ್ಕೆ ಹೆಚ್ಚು ಕೈಗಾರಿಕೆಗಳು ಬಂದಿಲ್ಲ. ಅಧಿಕಾರದಲ್ಲಿರುವವರು ಇಚ್ಛಾಶಕ್ತಿ ತೋರಿದರೆ ಆಯಾ ಭಾಗದ ಅಭಿವೃದ್ಧಿ ಸಾಧ್ಯ ಎಂದರು.
ಹೈದರಾಬಾದ್-ಕರ್ನಾಟಕ ಹಾಗೂ ಕಿತ್ತೂರು-ಕರ್ನಾಟಕ ಭಾಗದ ಶಾಸಕರೆಲ್ಲ ಒಂದಾಗಿ, ಈ ಭಾಗದ ಅಭಿವೃದ್ಧಿಗೆ ಆಸಕ್ತಿ ತೋರಬೇಕು.
ಸಮರ್ಪಕ ರಸ್ತೆ, ಸಾರಿಗೆ ವ್ಯವಸ್ಥೆ, ವಿದ್ಯುತ್, ನೀರು ಸೇರಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕು. ಅಂದಾಗ ಮಾತ್ರ ಕೈಗಾರಿಕೆಗಳು ಬರುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿನ ಶಾಸಕರಿಗೆ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುವುದೆಂದರೆ ಆತಂಕ. ತಮ್ಮ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಮನಬಿಚ್ಚಿ ಮಾತನಾಡಿ, ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಇನ್ಕಾಮೆಕ್ಸ್-2026 ವೆಬ್ಸೈಟ್ಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಎನ್.ಎಚ್. ಕೋನರಡ್ಡಿ, ಕಳೆದ ಐದು ಇನ್ಕಾಮೆಕ್ಸ್ಗಳಿಂದ ಏನು ಪ್ರಯೋಜನ ಆಗಿದೆ ? ಕೈಗಾರಿಕೆಗಳೆಲ್ಲ ಬೆಂಗಳೂರು ಕೇಂದ್ರೀಕೃತವಾಗಿವೆ.
ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಕೈಗಾರಿಕೆಗಳು ಪ್ರಾರಂಭಗೊಳ್ಳಬೇಕು. ಇದಕ್ಕಾಗಿ ಎಲ್ಲೆಡೆ ಮೂಲ ಸೌಲಭ್ಯಗಳನ್ನು ಒದಗಿಸುವ ಕಾರ್ಯವಾಗಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ಉದಯ ರೇವಣಕರ ಮಾತನಾಡಿ, ಇನ್ಕಾಮೆಕ್ಸ್ನಲ್ಲಿ ಕೇಂದ್ರ ಸಚಿವರಾದ ಪಿಯುಷ್ ಗೋಯಲ್, ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ರಾಜ್ಯ ಸಚಿವ ಎಂ. ಬಿ. ಪಾಟೀಲ, ಸಂತೋಷ ಲಾಡ್ ಹಾಗೂ ಇನ್ನಿತರ ಜನಪ್ರತಿನಿಧಿಗಳು, ಪ್ರಮುಖ ಕೈಗಾರಿಕೋದ್ಯಮಿಗಳು ಭಾಗವಹಿಸುವರು ಎಂದು ತಿಳಿಸಿದರು.
ವಿಭವ ಕೆಮಿಕಲ್ಸ್ ಸಿಇಒ ಎಚ್. ಎನ್. ನಂದಕುಮಾರ ಮಾತನಾಡಿದರು. ಕೆಸಿಸಿಐ ಅಧ್ಯಕ್ಷ ಜಿ. ಕೆ. ಆದಪ್ಪಗೌಡರ, ಉಪಾಧ್ಯಕ್ಷರಾದ ಪ್ರವೀಣ ಅಗಡಿ, ಸಿದ್ದೇಶ್ವರ ಕಮ್ಮಾರ, ವೀರಣ್ಣ ಕಲ್ಲೂರ, ಸ್ವರ್ಣ ಸಮೂಹ ಸಂಸ್ಥೆ ಚೇರ್ಮನ್ ಡಾ. ವಿ. ಎಸ್. ವಿ. ಪ್ರಸಾದ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಇತರರಿದ್ದರು.