ಹುಬ್ಬಳ್ಳಿ : ವಿಧಾನ ಪರಿಷತ್ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷರೊಂದಿಗೆ ಸಂಪರ್ಕದಲ್ಲಿರುವ ಕಾಂಗ್ರೆಸ್ನ 25 ಶಾಸಕರು ಚುನಾವಣೆ ನಂತರ ಬಿಜೆಪಿ ಸೇರಲಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಜತೆಗೂ ಏಳೆಂಟು ಜನ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ. ಅವರು ಸಹ ಬಿಜೆಪಿ ಸೇರಲು ಹಾತೊರೆಯುತ್ತಿದ್ದಾರೆ. ಕಾಂಗ್ರೆಸ್ನವರಿಗಾಗಿ, ಕಾಂಗ್ರೆಸ್ನವರೇ ಮಾಡಿರುವ ಸ್ಟಿಂಗ್ ಆಪರೇಶನ್ ಬಗ್ಗೆ ಸಿಬಿಐ ತನಿಖೆ ಆಗಬೇಕು. ಈ ಹಗರಣದಲ್ಲಿ ಯಾರೇ ತಪ್ಪಿತಸ್ಥರು ಇದ್ದರೂ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ರಾಜಕಾರಣ ಅಧೋಗತಿಗೆ ಹೋಗಿದೆ. ಸ್ಟಿಂಗ್ ಆಪರೇಶನ್ನಿಂದಾಗಿ ರಾಜ್ಯದ ಮಾನ ಹರಾಜಾಗಿದೆ. ರಾಜ್ಯಕ್ಕೆ ಹೊಸ ಕೈಗಾರಿಕೆಗಳು ಬರುತ್ತಿಲ್ಲ. ಇಲ್ಲಿರುವ ಕೈಗಾರಿಕೆಗಳು ಸಹ ಬೇರೆ ರಾಜ್ಯಗಳತ್ತ ಮುಖ ಮಾಡಿವೆ ಎಂದು ದೂರಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸೇರಿದಂತೆ ಬಿಜೆಪಿ ತೊರೆದ ಅನೇಕರು ಇಂದಲ್ಲ, ನಾಳೆ ಮರಳಿ ಪಕ್ಷಕ್ಕೆ ಬರುವುದು ಖಚಿತ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ. ಅವರೆಲ್ಲ ಪಕ್ಷಕ್ಕೆ ಮರಳುವುದರಿಂದ ಬಿಜೆಪಿ ಶಕ್ತಿ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದರು.
ಪಶ್ಚಿಮ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಮೂರನೇ ಬಾರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅವರ ಹ್ಯಾಟ್ರಿಕ್ ಗೆಲುವು ಖಚಿತ. ಸಂಕನೂರ ಅವರ ಗೆಲುವು ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಸಹಕಾರಿಯಾಗಲಿದೆ ಎಂದರು.
ಬೇಡಿಕೆ ನ್ಯಾಯಯುತ: ಗೊಬ್ಬರ, ವಿದ್ಯುತ್ ದರ ಹೆಚ್ಚಾಗಿದೆ. ಹೀಗಾಗಿ, ಕಬ್ಬಿನ ದರ ಹೆಚ್ಚಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳು ನ್ಯಾಯಯುತವಾಗಿವೆ. ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸುವುದಕ್ಕಾಗಿಯೇ ಕೇಂದ್ರ ಸರ್ಕಾರ ಈಗಾಗಲೇ ಸಮಿತಿ ರಚಿಸಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರೈತರ ನ್ಯಾಯಯುತ ಬೇಡಿಕೆಗಳ ಬಗ್ಗೆ ಕಾಳಜಿ ಹೊಂದಿದ್ದಾರೆ. ಕೃಷಿ ಹಾಗೂ ಪೆಟ್ರೋಲಿಯಂ ಸಚಿವರು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸೇರಿ ಜೋಶಿ ಅವರು ರೈತರ ಬೇಡಿಕೆಗಳನ್ನು ಈಡೇರಿಸಲಿದ್ದಾರೆ ಎಂದು ಹೇಳಿದರು.