ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ
ಸಿವಿಲ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿನ ಲೋಪಗಳನ್ನು ಖಂಡಿಸಿ ಮರುಪರೀಕ್ಷೆ ನಡೆಸಲು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ
ಸಂಘಟನೆ (ಅಕ್ಸಾ) ನಗರದಲ್ಲಿ ಮಂಗಳವಾರ ನಿಗದಿಪಡಿಸಿದ್ದ ಶಾಂತಿಯುತ ಪ್ರತಿಭಟನೆಯನ್ನು ಪೊಲೀಸರು ತಡೆಯೊಡ್ಡಿದರು. ಪ್ರತಿಭಟನಾ ಸ್ಥಳಕ್ಕೆ ತಲುಪುವ ಮೊದಲೇ ಸಂಘಟನೆಯ ಮುಖಂಡ ಕಾಂತಕುಮಾರ್ ಸೇರಿ 10 ವಿದ್ಯಾರ್ಥಿಗಳನ್ನುಪೊಲೀಸರು ವಶಕ್ಕೆ ಪಡೆದರು.
ಸಂಟನೆಯ ಅಧ್ಯಕ್ಷ ಕಾಂತಕುಮಾರ್ ನೇತೃತ್ವದಲ್ಲಿ ನಗರದ ಮಿಚಿಗನ್ ಕಾಂಪೌಂಡ್ನ ಉದ್ಯಾನದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು. ಆದರೆ, ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು. ಅಲ್ಲದೆ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಡಿಸಿಪಿಗಳು, ಎಸಿಪಿಗಳು, ಇನ್ಸ್ಪೆಕ್ಟರ್ಗಳು, ಅಧಿಕಾರಿ, ಸಿಬ್ಬಂದಿ ಸೇರಿ ಸುಮಾರು 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದರು. ಮಂಗಳವಾರ ಬೆಳಗ್ಗೆಯಿಂದಲೇ ಕಾಂತಕುಮಾರ್ ಪತ್ತೆಗಾಗಿ ಹಲವು ಪೊಲೀಸ್ ತಂಡಗಳು ಶೋಧ ನಡೆಸಿದ್ದವು. ಮಧ್ಯಾಹ್ನ 12 ಗಂಟೆಯಾದರೂ ಕಾಂತಕುಮಾರ್ ಕಾಣಿಸಿಕೊಂಡಿರಲಿಲ್ಲ. ಕೊನೆಗೆ ಕೋಚಿಂಗ್ ಸೆಂಟರ್ವೊಂದರಲ್ಲಿ ಪೊಲೀಸರು ಕಾಂತಕುಮಾರ್ರನ್ನು ವಶಕ್ಕೆ ಪಡೆದು ಹುಬ್ಬಳ್ಳಿಯತ್ತ ಕರೆದುಕೊಂಡು ಹೋದರು.
ಇದೇವೇಳೆ ಪ್ರತಿಭಟನೆಗೆ ಸಾಥ್ ಬೇರೆ ಜಿಲ್ಲೆಗಳ ಸುಮಾರು 10 ಮುಖಂಡರನ್ನು ಮಿಚಿಗನ್ ಕಾಂಪೌಂಡ್ ಬಳಿ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ನೇಮಕಾತಿ ಪ್ರಾಧಿಕಾರದ ಅಕ್ರಮ ಪ್ರಶ್ನಿಸುವುದು ಮತ್ತು ಶಾಂತಿಯುತ ಪ್ರತಿಭಟನೆಯನ್ನು ಪೊಲೀಸರು ಹತ್ತಿಕ್ಕಿದ್ದಾರೆ ಎಂದು ಅಕ್ಸಾ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಮುಂಜಾಗ್ರತಾ ಕ್ರಮವಾಗಿ ಸಪ್ತಾಪುರ, ಜಯನಗರ ಹಾಗೂ ಶ್ರೀನಗರ ಪ್ರದೇಶಗಳಲ್ಲಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.