police ganesh ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರನ್ನು ಮಹಾಮಂಡಳದಿಂದ ಸನ್ಮಾನಿಸಲಾಯಿತು. ಅಧ್ಯಕ್ಷ ಮೋಹನ ಲಿಂಬಿಕಾಯಿ, ಅಲ್ತಾಫ ಕಿತ್ತೂರ, ಶಾಂತರಾಜ ಪೋಳ, ಅಮರೇಶ ಹಿಪ್ಪರಗಿ, ಸಾಯಿನಾಥ ಹಿತ್ತಾಳಿ, ಇತರರು ಇದ್ದರು.
- ಪೊಲೀಸ್ ಆಯುಕ್ತರೊಂದಿಗೆ ಮಹಾಮಂಡಳ ಚರ್ಚೆ
- ಗಣೇಶ ಉತ್ಸವದಿಂದ ಮಾನವೀಯ ಮೌಲ್ಯಗಳು ಇಮ್ಮಡಿ
ಹುಬ್ಬಳ್ಳಿ: police ganesh ನಗರದಲ್ಲಿ ಶ್ರೀಗಣೇಶೋತ್ಸವವನ್ನು ಏಕತೆ ಮನೋಭಾವನೆಯಿಂದ ಆಚರಿಸುವುದರಿಂದ ಇಡೀ ನಾಡಿಗೆ ಮಾದರಿಯಾಗಿದೆ. ಈ ಉತ್ಸವ ನಿರಂತರವಾಗಿ ಮುಂದುವರೆಯಬೇಕು ಎಂದು ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಹೇಳಿದರು.
ನವನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಹುಬ್ಬಳ್ಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ ಮಹಾಮಂಡಳದ ನಿಯೋಗದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗಣೇಶ ಉತ್ಸವದಿಂದ ಮಾನವೀಯ ಮೌಲ್ಯಗಳು ಇಮ್ಮಡಿಯಾಗಿ ಹುಬ್ಬಳ್ಳಿ ನಗರ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ. ಉತ್ಸವವು ವೈಭವದಿಂದ ನಡೆಯಬೇಕು. ಶ್ರೀ ಗಣೇಶನನ್ನು ಭಕ್ತಿ, ಸಡಗರದಿಂದ ಸ್ವಾಗತಿಸಬೇಕು ಮತ್ತು ಎಲ್ಲರೂ ಸಹಕಾರ ಮನೋಭಾವದಿಂದ ಪಾಲ್ಗೊಳ್ಳುವುದು ಅವಶ್ಯ ಎಂದರು.
ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ಮಣ್ಣಿನಲ್ಲಿ ಅರಳಿದ ಸುಂದರ ಗಣೇಶ ವಿಗ್ರಹಗಳು, ಅನ್ನ ದಾಸೋಹ, ವರ್ಣರಂಜಿತ ಮಂಟಪಗಳು, ವಿದ್ಯುತ್ ಅಲಂಕಾರಗಳನ್ನು ಕಣ್ಣು ತುಂಬಿಕೊಳ್ಳಲು ಮತ್ತು ಸಂತೋಷ ಪಡಲು ಭಕ್ತಿ ಭಾವದಿಂದ ಭಕ್ತರು ಹುಬ್ಬಳ್ಳಿಗೆ ಆಗಮಿಸುತ್ತಾರೆ. ಅವರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಿ ಕೊಡುವುದು ನಮ್ಮ ಕರ್ತವ್ಯ. ಇದರೊಂದಿಗೆ ಪೊಲೀಸ್ ಇಲಾಖೆಯವರ ಸಂಪೂರ್ಣ ಸಹಕಾರ ಅವಶ್ಯ ಎಂದು ನುಡಿದರು.
ಮಹಾಮಂಡಳದ ಉಪಾಧ್ಯಕ್ಷರಾದ ಅಲ್ತಾಫ ಕಿತ್ತೂರ, ಶಾಂತರಾಜ ಪೋಳ ಮಾತನಾಡಿ, ಹಳೇಹುಬ್ಬಳ್ಳಿ ಭಾಗದಲ್ಲಿ ಸುಗಮ ಸಂಚಾರಕ್ಕೆ ಹಾಗೂ ಶ್ರೀಗಣೇಶ ಹಬ್ಬಕ್ಕೆ ಯಾವುದೇ ರೀತಿಯಿಂದ ಅಡೆತಡೆ ಉಂಟಾಗದಂತೆ ಸಂಚಾರಿ ಪೊಲೀಸರನ್ನು ನಿಯೋಜಿಸಬೇಕು ಎಂದರು.
ಸ್ಟೇಷನ್ ರೋಡ್ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಬೋಚಗೇರಿ, ಸಾಯಿನಾಥ ಹಿತ್ತಾಳಿ, ಈರಣ್ಣ ಪಾಳೇದ, ಸಿದ್ದಣ್ಣ ಅಂಗಡಿ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ರಾಜು ಕರಕಣ್ಣವರ ಮಾತನಾಡಿ, ಸ್ಟೇಶನ್ ರೋಡ, ಮರಾಠಾ ಗಲ್ಲಿ, ದುರ್ಗದ ಬೈಲ್, ಜವಳಿಸಾಲ, ಸರಾಫ ಗಟ್ಟಿ, ಶಿಂಪಿ ಗಲ್ಲಿ, ಭೂಸಪೇಟ, ದಾಜಿಬಾನಪೇಟನಲ್ಲಿ ಜನದಟ್ಟಣೆ ನಿಯಂತ್ರಿಸಲು ಹಾಗೂ ಸುಗಮ ಸಂಚಾರಕ್ಕೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಆಯುಕ್ತೆ ಶೃತಿ ಎನ್.ಎಸ್. ಅವರಿಗೆ ಗಣೇಶ ಫಲಕ ನೀಡಿ ಸನ್ಮಾನಿಸಲಾಯಿತು.
ನಿವೃತ್ತ ಪ್ರಾಂಶುಪಾಲ ಜಿ.ಎಸ್. ಪಲ್ಲೇದ, ಮೃತ್ಯುಂಜಯ ಕಮಡೊಳ್ಳಿಶೆಟ್ಟರ್, ರವೀಂದ್ರ ಹಳಿಜೋಳ, ರೋಹನ ಗೋಂದಕರ ಉಪಸ್ಥಿತರಿದ್ದರು. ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ನಿರ್ವಹಿಸಿದರು.