ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿರುವ Firing ಗಾಯಾಳು ಪೊಲೀಸರ ಆರೋಗ್ಯವನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭಾನುವಾರ ವಿಚಾರಿಸಿದರು.
ಹುಬ್ಬಳ್ಳಿ: ವಿಚಾರಣೆ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಕೊಲೆ ಆರೋಪಿಗಳ ಕಾಲಿಗೆ ಗುಂಡು ಹೊಡೆದ ಘಟನೆ ಇಲ್ಲಿಯ ಮಂಟೂರು ರಸ್ತೆ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
ಬಾಲರಾಜ ಅಲಿಯಾಸ್ ಬಂಗಾರ ಬಾಲ್ಯಾ ಹಾಗೂ ಮಹಮ್ಮದ್ ಶೇಖ್ ಗುಂಡೇಟು ತಿಂದವರು.
ಕಳೆದ ಮೂರು ದಿನಗಳ ಹಿಂದೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ನಗರದ ಮಂಟೂರ ರೋಡ್ ಬ್ಯಾಳಿ ಪ್ಲಾಟ್ ಬಳಿ, ಮಲ್ಲಿಕ್‌ಜಾನ್ (27) ಎಂಬಾತನನ್ನು ಸೆಟ್ಲಮೆಂಟ್ ಗ್ಯಾಂಗ್ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಡಿಗೇರಿ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ಭಾನುವಾರ ಬೆಳಗ್ಗೆ ಇನ್ನುಳಿದ ಆರೋಪಿಗಳ ಪತ್ತೆಗೆಂದು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾಗ, ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಆರ್. ನಾಯಕ್, ಪೇದೆಗಳಾದ ನೂರ್‌ಅಹ್ಮದ್ ನೀಲಗಾರ, ಕಿರಣ ಚಲವಾದಿ ಅವರ ಮೇಲೆ ಆರೋಪಿಗಳಿಬ್ಬರು ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆಗ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಎಚ್ಚೆತ್ತುಕೊಳ್ಳದೇ ಇದ್ದಾಗ ಆರೋಪಿಗಳಿಬ್ಬರ ಬಲ ಗಾಲಿಗೆ ಗುಂಡು ಹಾರಿಸಿದ್ದಾರೆ.
ಗಾಯಗೊಂಡಿರುವ ಆರೋಪಿಗಳಾದ ಬಾಲರಾಜ ಅಲಿಯಾಸ್ ಬಂಗಾರ ಬಾಲ್ಯಾ, ಮಹಮ್ಮದ್ ಶೇಖ್ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಆರ್. ನಾಯಕ್, ಪೇದೆಗಳಾದ ನೂರ್‌ಅಹ್ಮದ್ ನೀಲಗಾರ, ಕಿರಣ ಚಲವಾದಿ ಅವರನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕೆಎಂಸಿಆರ್‌ಐಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ವಿಚಾರಣೆಗೆ ಕರೆದೊಯ್ದ ವೇಳೆ ನಮ್ಮ ಪೊಲೀಸ್ ಸಿಬ್ಬಂದಿ ಮೇಲೆ ಕೊಲೆ ಆರೋಪಿಗಳಿಬ್ಬರು ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಹಾಗಾಗಿ ಆರೋಪಿಗಳ ಕಾಲಿಗೆ ಫೈರಿಂಗ್ ಮಾಡಲಾಗಿದೆ.
ಬಾಲರಾಜ ಹಾಗೂ ಮಹಮ್ಮದ್ ಶೇಖ್ ಮೇಲೆ ಬೇರೆ ಬೇರೆ ಠಾಣೆಗಳಲ್ಲಿ ದರೋಡೆ, ಕೊಲೆ ಯತ್ನ ಸೇರಿ ಇತರ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಮಂಟೂರು ರೋಡ್ ಪ್ರದೇಶ ಸೂಕ್ಷ್ಮವಾಗಿದೆ. ಇಲ್ಲಿರುವ ಎರಡು ಗುಂಪುಗಳು ತಮ್ಮ ಪ್ರತಿಷ್ಠೆ ಪ್ರದರ್ಶನಕ್ಕೆ ಈ ರೀತಿಯ ಕೃತ್ಯದಲ್ಲಿ ತೊಡಗುತ್ತಿರುವುದು ಗಮನಕ್ಕೆ ಬಂದಿದೆ. ಕೊಲೆ ಮಾಡಿದ್ದರ ಹಿಂದೆ 10ಕ್ಕೂ ಹೆಚ್ಚು ಜನರು ಇರುವುದು ಬಯಲಾಗಿದೆ. ಶೀಘ್ರವೇ ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.