pm vbry ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಿಎಫ್ ಆಯುಕ್ತ ಅಶುತೋಷ, ಮಂಜುನಾಥ ಇದ್ದರು.
- ಕೇಂದ್ರ ಸಚಿವ ಜೋಶಿ, ಶಾಸಕರು ಭಾಗಿ
- ಬೆಳಗಾವಿಯ ಫೌಂಡ್ರಿ ಕ್ಲಸ್ಟರ್ನಲ್ಲಿಯೂ ಕಾರ್ಯಕ್ರಮ
ಹುಬ್ಬಳ್ಳಿ: pm vbry ಇಲ್ಲಿಯ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ ಒ) ಪ್ರಾದೇಶಿಕ ಕಚೇರಿ ಆಶ್ರಯದಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ (ಪಿಎಂ ವಿಬಿಆರ್ವೈ) ಅಡಿಯಲ್ಲಿ ಜೂನ್ 19ರಂದು ಸಂಜೆ 4ಕ್ಕೆ ನಗರದ ಬಿವಿಬಿ ಕ್ಯಾಂಪಸ್ನಲ್ಲಿರುವ ದೇಶಪಾಂಡೆ ಫೌಂಡೇಷನ್ನಲ್ಲಿ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಿಎಫ್ ಪ್ರಾದೇಶಿಕ ಆಯುಕ್ತ ಅಶುತೋಷ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.
ದೆಹಲಿಯ ವಿಜ್ಞಾನ ಭವನದಿಂದ ಕಾರ್ಯಕ್ರಮಕ್ಕೆ ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ವಿಮಾನ ನಿಲ್ದಾಣ ನಿರ್ದೇಶಕ ರೂಪೇಶ ಕುಮಾರ, ಕೆಸಿಸಿಐ ಪದಾಧಿಕಾರಿಗಳು, ಅತಿಥಿಗಳಾಗಿ ಭಾಗವಹಿಸುವರು ಎಂದರು.
ದೇಶದ ಎಲ್ಲ ಕಡೆಗಳಲ್ಲಿ ಈ ಕಾರ್ಯಕ್ರಮ ಸ್ಥಳಿಯ ನಾಯಕರ ನೇತೃತ್ವದಲ್ಲಿ ನಡೆಯಲಿದೆ. ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಬೆಳಗಾವಿಯ ಫೌಂಡ್ರಿ ಕ್ಲಸ್ಟರ್ನಲ್ಲಿಯೂ ಕಾರ್ಯಕ್ರಮ ಆಯೋಜನೆಗೊಂಡಿದೆ.
ಸಾಮಾಜಿಕ ಭದ್ರತಾ ಯೋಜನೆಗಳು, ಹೊಸದಾಗಿ ನೇಮಕಗೊಂಡ ನೌಕರರಿಗೆ ನೇಮಕಾತಿ ಪತ್ರ ವಿತರಣೆ, ಕಾರ್ಮಿಕ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
2025ರ ಆಗಸ್ಟ್ 15ರಂದು ಪ್ರಾರಂಭವಾದ ಪಿಎಂ-ವಿಬಿಆರ್ವೈ ಅಡಿ ಉದ್ಯೋಗದಾತರು ಹಾಗೂ ಫಲಾನುಭವಿಗಳ ನಡುವೆ ಸಂವಹನ ಸುಗಮಗೊಳಿಸಿಲಾಗುತ್ತಿದೆ. ಇದರಿಂದಾಗಿ ಈವರೆಗೆ ದೇಶದಲ್ಲಿ 1.09 ಕೋಟಿ ಉದ್ಯೋಗ ಸೃಷ್ಟಿಯಾಗಿ ಅವರೆಲ್ಲ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ ಎಂದರು.
ಎರಡು ವರ್ಷದ ಅವಧಿಯಲ್ಲಿ ಒಟ್ಟು 3.5 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಸಲು ಯೋಜನೆಯಡಿ ಪ್ರೋತ್ಸಾಹ ನೀಡಲಾಗುತ್ತಿದೆ.
ಈ ಯೋಜನೆಯಡಿ ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ 7056 ಉದ್ಯೋಗದಾತರು ಸಕ್ರಿಯರಾಗಿದ್ದು, ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಖಾಸಗಿ ಹಾಗೂ ಸರ್ಕಾರಿ ರಂಗದಲ್ಲಿ 5.77 ಲಕ್ಷ ಜನ ರಾಜ್ಯದಲ್ಲಿ ಮೊದಲ ಬಾರಿ ಉದ್ಯೋಗಕ್ಕೆ ಸೇರಿದ್ದು, ಪಿಎಫ್ ಖಾತೆ ಸೃಜನೆಯಾಗಿವೆ ಎಂದರು.