ಹುಬ್ಬಳ್ಳಿಯ (petrol problem) ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ (petrol problem) ಇಂಧನ ಕೊರತೆ ಇಲ್ಲ. ನಾಲ್ಕರಿಂದ ಐದು ದಿನಗಳವರೆಗೆ ಆಗುವಷ್ಟು ಸಂಗ್ರಹವಿದೆ. ನಗರ ಮತ್ತು ಗ್ರಾಮೀಣ ಸೇರಿ ಒಟ್ಟು 204 ಪೆಟ್ರೋಲ್ ಬಂಕ್‌ಗಳಿವೆ. ಪ್ರತಿದಿನ 371 ಕೆಎಲ್ ಪೆಟ್ರೋಲ್ ಮತ್ತು 582 ಕೆಎಲ್ ಡೀಸೆಲ್ ವಿತರಿಸಲಾಗುತ್ತಿದೆ. ಇದಕ್ಕೂ ಮೊದಲು 267 ಕೆಎಲ್ ಪೆಟ್ರೋಲ್, 480 ಕೆಎಲ್ ಡೀಸೆಲ್ ಮಾರಾಟವಾಗುತ್ತಿತ್ತು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ತಿಳಿಸಿದರು.
ನಗರದ ವಿವಿಧ ಪೆಟ್ರೋಲ್ ಬಂಕ್‌ಗಳಿಗೆ ಬುಧವಾರ ಭೇಟಿ ನೀಡಿ, ಪರಿಶೀಲನೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇಂಧನ ಕೊರತೆ ಊಹಾಪೋಹ ಸೃಷ್ಟಿಯಾದ ಹಿನ್ನೆಲೆಯಲ್ಲಿ ಜನರು ಪೆಟ್ರೋಲ್ ಬಂಕ್‌ಗಳತ್ತ ಧಾವಿಸುತ್ತಿದ್ದಾರೆ. ಜಿಲ್ಲೆಯಲ್ಲಿ 1,115 ಕೆಎಲ್ ಪೆಟ್ರೋಲ್ ಹಾಗೂ 1,735 ಕೆಎಲ್ ಡೀಸೆಲ್ ದಾಸ್ತಾನಿದೆ. ಯಾವುದೇ ರೀತಿಯಲ್ಲಿ ಜನರು ಆತಂಕಕ್ಕೆ ಒಳಗಾಗಬಾರದು. ಸ್ಟಾಕ್ ಖಾಲಿಯಾದ ತಕ್ಷಣ ಸರಬರಾಜು ಮಾಡಲಾಗುತ್ತಿದೆ ಎಂದರು.
ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿಕೊಂಡವರ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈಗಾಗಲೇ ಮೂರು ಪ್ರಕರಣ ದಾಖಲಿಸಿದ್ದು, ಒಟ್ಟು 75 ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಜಪ್ತಿ ಮಾಡಲಾಗಿದೆ. ಅನಧಿಕೃತವಾಗಿ ಸಂಗ್ರಹಿಸಿ, ಮಾರಾಟ ಮಾಡುವವರ ಮೇಲೆ ನಿರಂತರ ನಿಗಾವಹಿಸಲಾಗುತ್ತಿದೆ. ಈ ರೀತಿಯ ಅಕ್ರಮ ಚಟುವಟಿಕೆಗಳಿಗೆ ತಡೆಯೊಡ್ಡಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತಂಡಗಳು ಪರಿಶೀಲನೆ ನಡೆಸುತ್ತಿವೆ ಎಂದರು.
ಸರ್ಕಾರದ ಮಾರ್ಗಸೂಚಿಗಳಂತೆ, ಸಿಲಿಂಡರ್ ಸರಬರಾಜಿನಲ್ಲಿ ಮೊದಲ ಆದ್ಯತೆಯನ್ನು ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ. ನಂತರ ಹೋಟೆಲ್ಗಳಿಗೆ ವಿತರಿಸಲಾಗುತ್ತಿದೆ. ಅನಧಿಕೃತ ಸಂಗ್ರಹಣೆ ಅಥವಾ ಮಾರಾಟ ಮಾಡುತ್ತಿರುವುದು ಕಂಡುಬಂದರೆ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅವರು ಸಾರ್ವಜನಿಕರಿಗೆ ವಿನಂತಿಸಿದರು.
ಹುಬ್ಬಳ್ಳಿ ಶಹರ ತಹಸೀಲ್ದಾರ್ ಮಹೇಶ ಗಸ್ತೆ, ಉಪನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಭು ಗಂಗೇನಹಳ್ಳಿ, ಕಂದಾಯ ನಿರೀಕ್ಷಕ ರವಿ ಬೆನ್ನೂರ ಸೇರಿದಂತೆ ಇತರರು ಇದ್ದರು.