png ಪೈಪ್ ನ್ಯಾಚುರಲ್ ಗ್ಯಾಸ್ (ಪಿಎನ್​ಜಿ) ಸಂಪರ್ಕ. 
ಧಾರವಾಡ

ಪಿಎನ್​ಜಿ ಸಂಪರ್ಕಕ್ಕೆ ಜನರ ಹಿಂದೇಟು png

ಪ್ರಮುಖ ಮುಖ್ಯಾಂಶಗಳು

  • ಯುದ್ಧದ ಸಂದರ್ಭದಲ್ಲಿ ಕೇವಲ ಶೇ. 5ರಷ್ಟು ಹೊಸ ಸಂಪರ್ಕ.
  • ಎಲ್​ಪಿಜಿಯಿಂದ ದೂರವಾಗಲು ಬಯಸದ ಜನ.
  • ಎಲ್​ಪಿಜಿ ಸಿಲೆಂಡರ್ ಗ್ಯಾಸ್ ಸುಲಭವಾಗಿ ಸಿಗುತ್ತಿದೆ.
ಹುಬ್ಬಳ್ಳಿ :
ಪಿಎನ್​ಜಿ ಪೈಪ್​ಲೈನ್ ಇರುವ ಪ್ರದೇಶದಲ್ಲಿನ ಜನರು ಕಡ್ಡಾಯವಾಗಿ ಸಂಪರ್ಕ ಪಡೆಯಬೇಕು ಎಂಬ ಸೂಚನೆಯನ್ನು ಸರ್ಕಾರ ಈ ಹಿಂದೆ ನೀಡಿತ್ತು.
ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕ್​ನಲ್ಲಿರುವ ಆಯಿಲ್-ಅದಾನಿ ಗ್ಯಾಸ್ ಪ್ರೖೆವೇಟ್ ಲಿಮಿಟೆಡ್ (ಐಒಎಜಿ) ಕಚೇರಿಯಿಂದಲೂ ಪಿಎನ್​ಜಿ ಸಂಪರ್ಕಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆದಿತ್ತು.
ಯುದ್ಧದ ಸಮಯದಲ್ಲಿ ಎಲ್​ಪಿಜಿ ಸಿಲೆಂಡರ್​ಗಳ ಕೊರತೆಯಿಂದಾಗಿ ಹೋಟೆಲ್, ಹಾಸ್ಟೆಲ್​ಗಳಿಗೂ ಸಮಸ್ಯೆಯಾಗಿತ್ತು.
ಆದರೂ, ಬಹುತೇಕ ಮನೆಗಳು, ಹೋಟೆಲ್, ಹಾಸ್ಟೆಲ್​ಗಳು ಪಿಎನ್​ಜಿ ಸಂಪರ್ಕಕ್ಕೆ ಹಿಂದೇಟು ಹಾಕಿವೆ.
ಇದೀಗ, ಪರಿಸ್ಥಿತಿ ಸುಧಾರಿಸಿ ಎಲ್​ಪಿಜಿ ಸಿಲೆಂಡರ್ ಗ್ಯಾಸ್ ಸುಲಭವಾಗಿ ಸಿಗುತ್ತಿದೆ. ಅಲ್ಲದೇ, ದರವೂ ಇಳಿಕೆಯಾಗಿದೆ.
ಎಲ್​ಪಿಜಿ ಸಿಲೆಂಡರ್ ಸಮಸ್ಯೆ ಇದ್ದಾಗಲೇ ಪಿಎನ್​ಜಿ ಸಂಪರ್ಕಕ್ಕೆ ಹಿಂದೇಟು ಹಾಕಿದ್ದ ಜನರು, ಈಗಂತೂ ಅದರತ್ತ ಯೋಚನೆಯನ್ನೂ ಮಾಡದಂತಾಗಿದ್ದಾರೆ.
ಮೂಲಗಳ ಪ್ರಕಾರ ಕಳೆದ 8 ವರ್ಷದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 35 ಸಾವಿರ ಮನೆಗಳಿಗೆ ಮಾತ್ರ ಪಿಎನ್​ಜಿ ಸಂಪರ್ಕ ನೀಡಲಾಗಿದೆ.
ಯುದ್ಧದ ಸಂದರ್ಭದಲ್ಲಿ ಉಂಟಾದ ಗ್ಯಾಸ್ ಸಿಲೆಂಡರ್ ಸಮಸ್ಯೆ ಸಂದರ್ಭದಲ್ಲಿ ಪಿಎನ್​ಜಿ ಸಂಪರ್ಕಕ್ಕಾಗಿ ಸುಮಾರು 500 ರಿಂದ 1 ಸಾವಿರ ಅರ್ಜಿಗಳು ಐಒಎಜಿ ಕಚೇರಿಗೆ ಬಂದಿದ್ದವು. ಆದರೆ, ಆ ಸಮಯದಲ್ಲಿ ಎರಡರಿಂದ ಮೂರುಸಾವಿರ ಅರ್ಜಿಗಳು ಪೈಪ್ ನ್ಯಾಚುರಲ್ ಗ್ಯಾಸ್​ಗಾಗಿ ಬರಬಹುದೆಂದು ನಿರೀಕ್ಷಿಸಲಾಗಿತ್ತು.
ಈಗಾಗಲೇ ಪಿಎನ್​ಜಿ ಪೈಪ್​ಲೈನ್ ಇರುವ ಮನೆಗಳಲ್ಲಿ ನಿತ್ಯ 8-10 ಸಂಪರ್ಕಗಳನ್ನು ನೀಡಲಾಗುತ್ತಿದೆ. ಮೂಲಗಳ ಪ್ರಕಾರ ಯುದ್ಧದ ಅವಧಿಯಲ್ಲಿ ಶೇ. 15ರಷ್ಟು ಪಿಎನ್​ಜಿ ಸಂಪರ್ಕಗಳು ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿತ್ತು.
ಆದರೆ, ಶೇ. 5 ರಿಂದ 8ರಷ್ಟು ಮಾತ್ರ ಜನರು ಹೊಸ ಸಂಪರ್ಕ ಪಡೆಯಲು ಉತ್ಸಾಹ ತೋರಿದ್ದು, ಶೇ. 5ರಷ್ಟು ಹೊಸ ಸಂಪರ್ಕಗಳು ಮಾತ್ರ ಏರಿಕೆಯಾಗಿವೆ.
ಪಿಎನ್​ಜಿ ಹೊಸ ಸಂಪರ್ಕಕ್ಕೆ ಆಗುವ ವಿಳಂಬದಿಂದಾಗಿ ಜನರು ಉತ್ಸಾಹ ತೋರುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಎರಡ್ಮೂರು ತಿಂಗಳು ನಂತರ ಸಂಪರ್ಕ ನೀಡಲಾಗುತ್ತದೆ. ಹೊಸ ಸಂಪರ್ಕಕ್ಕೆ 7,118 ರೂ. ಪಾವತಿಸಬೇಕಾಗುತ್ತದೆ. ಇದರಲ್ಲಿ 6 ಸಾವಿರ ರೂ. ಠೇವಣಿಗಾಗಿ ಮೀಸಲಿಡಲಾಗುತ್ತದೆ.
ಮನೆಯ ಸಮೀಪ ಪಿಎನ್​ಜಿ ಪೈಪ್​ಲೈನ್ ಇರಬೇಕು. 15 ಮೀಟರ್​ವರೆಗಿನ ದೂರದಲ್ಲಿ ಪೈಪ್​ಲೈನ್ ಇದ್ದರೆ ಉಚಿತ ಸಂಪರ್ಕ ನೀಡಲಾಗುತ್ತದೆ. ಒಂದು ವೇಳೆ ಪೈಪ್​ಲೈನ್ ದೂರ ಇದ್ದರೆ, ಹೆಚ್ಚುವರಿ ಹಣ ಪಾವತಿಸುವುದು ಗ್ರಾಹಕರಿಗೆ ಅನಿವಾರ್ಯ.
ಪೈಪ್​ಲೈನ್ ಇಲ್ಲದ ಬಡಾವಣೆಯವರು ಅರ್ಜಿ ಸಲ್ಲಿಸಿದರೆ, ಆ ಬಡಾವಣೆಯಲ್ಲಿ ಪೈಪ್​ಲೈನ್ ಹಾಕದ ಹೊರತು ಸಂಪರ್ಕ ಅಸಾಧ್ಯ.
ಹೀಗಾಗಿ, ಈಗಾಗಲೇ ಎಲ್​ಪಿಜಿ ಗ್ಯಾಸ್ ಸಿಲೆಂಡರ್ ಸೌಲಭ್ಯ ಹೊಂದಿರುವವರು ಪಿಎನ್​ಜಿ ಸಂಪರ್ಕಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರ, ಶಿರೂರ ಪಾರ್ಕ್, ಡಾಲರ್ಸ್ ಕಾಲನಿ, ನವನಗರ, ರೇಣುಕಾ ನಗರ, ಮಂಜುನಾಥ ನಗರ, ಅರಿಹಂತ ನಗರ, ರಾಯಾಪುರ, ಧಾರವಾಡದ ಗಾಂಧಿನಗರಗಳಲ್ಲಿ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಪೈಪ್ ನ್ಯಾಚುರಲ್ ಗ್ಯಾಸ್​ಗಾಗಿ ಪೈಪ್​ಲೈನ್ ಅಳವಡಿಸಲಾಗಿದೆ.
ಆದರೂ, ಇಲ್ಲಿಯ ಜನರು ಸಂಪೂರ್ಣವಾಗಿ ಎಲ್​ಪಿಜಿ ಗೃಹಬಳಕೆ ಅಡುಗೆ ಗ್ಯಾಸ್ ಸಿಲೆಂಡರ್​ನಿಂದ ಪಿಎನ್​ಜಿಗೆ ಬದಲಾಗಲು ಹಿಂದೇಟು ಹಾಕುತ್ತಿದ್ದಾರೆ.
ಕೆಲ ಮನೆಗಳಲ್ಲಿ ಪಿಎನ್​ಜಿ ಸಂಪರ್ಕ ಇದ್ದರೂ, ಅದನ್ನು ಬಳಸದೇ ಎಲ್​ಪಿಜಿ ಗ್ಯಾಸ್ ಸಿಲೆಂಡರ್ ಬಳಕೆ ಮಾಡಲಾಗುತ್ತಿದೆ. ಇನ್ನೂ ಕೆಲವರು ಶುಲ್ಕ ಪಾವತಿಸದ ಕಾರಣ, ಪಿಎನ್​ಜಿ ಸಂಪರ್ಕ ಕಡಿತಗೊಳಿಸಲಾಗಿದೆ.