ಮಂಜುನಾಥ ಎಸ್. ಅಂಗಡಿ ಧಾರವಾಡ
ಆರ್ಥಿಕ ಸಂಕಟಕ್ಕೆ ಸಿಲುಕಿ ಬಳಲುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪಿಂಚಣಿ ಪಾವತಿಗಾಗಿ ರಾಜ್ಯ ಸರ್ಕಾರವು ಇತ್ತೀಚೆಗೆ 25 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದರೆ, ಇದು "ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ' ಎಂಬಂತಾಗಿದೆ! ಇದು ಪಿಂಚಣಿ ಪರದಾಟದ ಸಮಸ್ಯೆಗೆ ತಾತ್ಕಾಲಿಕ ಪರಿಹಾರವೇ ಹೊರತು, ಶಾಶ್ವತ ಪರಿಹಾರವಲ್ಲ. ಹೀಗಾಗಿ ಕವಿವಿಯ ಆರ್ಥಿಕ ಮುಗ್ಗಟ್ಟು ಮುಂದುವರಿದಿದೆ.
ವಿಶ್ವವಿದ್ಯಾಲಯಕ್ಕೆ 2025- 26ರ ಆಥಿರ್ಕ ವರ್ಷಕ್ಕೆ ನಿವೃತ್ತ ಬೋಧಕರು, ಬೋಧಕೇತರರ ಪಿಂಚಣಿ ಪಾವತಿಗೆ ವಾಷಿರ್ಕ ಅಂದಾಜು 126 ಕೋಟಿ ರೂ. ಬೇಕು. ಈ ಕುರಿತು ಕವಿವಿ ಆಡಳಿತಾಧಿಕಾರಿಗಳು ಹಲವು ಬಾರಿ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸಿ ಅನುದಾನ ಬಿಡುಗಡೆಗೆ ಕೋರಿದ್ದಾರೆ. ರಾಜ್ಯ ಸರ್ಕಾರ ಮೊದಲ ಕಂತಿನ 55 ಕೋಟಿ ರೂ. ಮತ್ತು ಇತ್ತೀಚೆಗೆ 25 ಕೋಟಿ ರೂ. ಸೇರಿ 80 ಕೋಟಿ ರೂ. ನೀಡಿದೆ. ಇನ್ನೂ 46 ಕೋಟಿ ರೂ.ಗಳ ಕೊರತೆ ವಿಶ್ವವಿದ್ಯಾಲಯಕ್ಕೆ ಆಥಿರ್ಕ ಹೊರೆಯಾಗಿದೆ.
ಕವಿವಿಯಲ್ಲಿ ಪ್ರಸ್ತುತ ಬೋಧಕ- ಬೋಧಕೇತರ ಸಿಬ್ಬಂದಿ ಸೇರಿ 1,748 ನಿವೃತ್ತರಿದ್ದಾರೆ. 7ನೇ ವೇತನ ಆಯೋಗ ಜಾರಿಯ ನಂತರ ನಿವೃತ್ತ ಪ್ರಾಧ್ಯಾಪಕರೊಬ್ಬರಿಗೆ ಗರಿಷ್ಠ 1.15 ಲಕ್ಷ ರೂ. ಪಿಂಚಣಿ ಇದೆ. ಇದುವರೆಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ವಿವಿಗೆ ೆಬ್ರವರಿವರೆಗಿನ ಪಿಂಚಣಿ ಪಾವತಿ ಸಾಧ್ಯ. ಮಾರ್ಚ್ ಪಿಂಚಣಿ ಪಾವತಿ ಕಷ್ಟಸಾಧ್ಯ ಎನ್ನುತ್ತಾರೆ ವಿಶ್ವವಿದ್ಯಾಲಯದ ಆಡಳಿತಾಧಿಕಾರಿಗಳು.
ಕಾಯಂ ಬೋಧಕರಿಗೆ ಸರ್ಕಾರವೇ ವೇತನ ಕೊಡುತ್ತದೆ. ಆದರೆ, 12 ವರ್ಷಗಳಿಂದ ಹೊಸ ನೇಮಕಾತಿ ಆಗದೆ ಅತಿಥಿ ಉಪನ್ಯಾಸರಿಗೆ ವಿವಿಯಿಂದಲೇ ವೇತನ ಕೊಡುವಂತಾಗಿದೆ. ಇದು ಸಹ ಹೊರೆಯೇ. ವಿವಿಧ ಇಲಾಖೆಗಳ ನಿವೃತ್ತರಿಗೆ ರಾಜ್ಯ ಸರ್ಕಾರವೇ ಪಿಂಚಣಿ ಹಣ ಭರಿಸುತ್ತದೆ. ಆದರೆ, ವಿಶ್ವವಿದ್ಯಾಲಯದ ನಿವೃತ್ತರಿಗೆ ಪಿಂಚಣಿ ಪಾವತಿಗೆ ಸರ್ಕಾರದ ಅನುದಾನ ಸಾಕಾಗುತ್ತಿಲ್ಲ. ಆಂತರಿಕ ಸಂಪನ್ಮೂಲವನ್ನು ಪಿಂಚಣಿಗೆ ಸರಿದೂಗಿಸಲು ಪರದಾಡಬೇಕಾಗಿದೆ. ವಿದ್ಯಾಥಿರ್ಗಳ ದಾಖಲಾತಿ ಸಂಖ್ಯೆ ಹೆಚ್ಚಾದರೆ ಅನುಕೂಲ. ಆದರೆ, ಬಹುತೇಕ ವಿಭಾಗಗಳಲ್ಲಿ ನಿಗದಿತ ಸೀಟುಗಳಿಗಿಂತ ಕಡಿಮೆ ವಿದ್ಯಾಥಿರ್ಗಳ ಪ್ರವೇಶಾತಿಯಾಗಿದೆ. ಆದರೂ ಹಿಂದಿದ್ದಷ್ಟೇ ವೆಚ್ಚ ಮುಂದುವರಿದಿದ್ದು, ಇದುವೇ ಆರ್ಥಿಕ ಬಿಕ್ಕಟ್ಟಿಗೆ ಕಾರಣ.
ಆಂತರಿಕ ಸಂಪನ್ಮೂಲವನ್ನು ಪಿಂಚಣಿ ಪಾವತಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದರಿಂದ ವಿವಿ ಅಭಿವೃದ್ಧಿ ಕಾರ್ಯಗಳಿಗೆ ಹೊಡೆತ, ಕಟ್ಟಡ ನಿರ್ಮಾಣ, ನಿರ್ವಹಣೆಗೆ ಹಣಕಾಸಿನ ಕೊರತೆ, ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸರ್ಕಾರದ ಗಮನಕ್ಕೆ ತಂದು ಉತ್ತರ ಕರ್ನಾಟಕದ ಹೆಮ್ಮೆಯ ವಿಶ್ವವಿದ್ಯಾಲಯವನ್ನು ಉಳಿಸಿಕೊಂಡು ಹೋಗಲು ಯತ್ನಿಸಬೇಕಿದೆ.
ಅನುದಾನ ಕೊಟ್ಟು ಷರತ್ತು ವಿಧಿಸಿದ ಸರ್ಕಾರ
ಪಿಂಚಣಿ ಪಾವತಿಗಾಗಿ 2ನೇ ಕಂತಿನ ಹೆಚ್ಚುವರಿ ಅನುದಾನ ಬಿಡುಗಡೆಯೊಂದಿಗೆ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿದೆ. ಪುನಃ ಹೆಚ್ಚುವರಿ ಅನುದಾನ ಕೋರಬಾರದು. ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು. ಹಣ ಬಳಕೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಹೊಸ ತಾಂತ್ರಿಕ ಕೋರ್ಸ್ಗಳನ್ನು ಆರಂಭಿಸಿ ವಿದ್ಯಾಥಿರ್ಗಳ ದಾಖಲಾತಿ ಹೆಚ್ಚಿಸಿಕೊಳ್ಳಬೇಕು. ಮಂಜೂರಾದ ಹುದ್ದೆಗಳಿಂತ ಹೆಚ್ಚಿನ ನೇಮಕಾತಿ ಮಾಡಿಕೊಂಡಿರುವುದನ್ನು ಕೈಬಿಡಬೇಕು. ಅನುಪಯುಕ್ತ, ಬಳಕೆಯಲ್ಲಿ ಇಲ್ಲದ ಕಟ್ಟಡಗಳನ್ನು ಬಾಡಿಗೆಗೆ ನೀಡಬೇಕು. ಕಡಿಮೆ ದಾಖಲಾತಿ ಇರುವ ಕೋರ್ಸ್ಗಳನ್ನು ಮುಚ್ಚಬೇಕು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ಆಥಿರ್ಕ ಆದೇಶ, ಮಿತವ್ಯಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ತಾಕೀತು ಮಾಡಿದೆ.
ನಮ್ಮಲ್ಲಿ 1,748 ನಿವೃತ್ತರಿದ್ದಾರೆ. 2025- 26ರಲ್ಲಿ ಪಿಂಚಣಿ ಪಾವತಿಗೆ ಅಗತ್ಯವಿದ್ದ 126 ಕೋಟಿ ರೂ.ಗಳಲ್ಲಿ 80 ಕೋಟಿ ರೂ. ಬಿಡುಗಡೆಯಾಗಿದ್ದು, 46 ಕೋಟಿ ರೂ. ಕೊರತೆಯಾಗಿದೆ. ಇದನ್ನು ಸರಿದೂಗಿಸಲು ಆಂತರಿಕ ಸಂಪನ್ಮೂಲ ಬಳಕೆ, ಆಡಳಿತಾತ್ಮಕ ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ.