ಸಾಂದರ್ಭಿಕ 
ಧಾರವಾಡ

pension: ಪಿಂಚಣಿಗಾಗಿ ಪೇಚಾಟ, ಅಲೆದಾಟ!

ಮಂಜುನಾಥ ಗದಗಿನ

ಪ್ರಮುಖ ಮುಖ್ಯಾಂಶಗಳು

  • ಮೂರು ತಿಂಗಳಿನಿಂದ ಸಂದಾಯವಾಗದ ಹಣ
  • ಅನರ್ಹರ ಪತ್ತೆ ಹಿನ್ನೆಲೆಯಲ್ಲಿ ಸ್ಥಗಿತ
  • ಸಾಮಾಜಿಕ ಭದ್ರತಾ ಪಿಂಚಣಿ
ಮಂಜುನಾಥ ಗದಗಿನ ಹುಬ್ಬಳ್ಳಿ
ಅನರ್ಹರು ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿರುವ ಕಾರಣ ಸರ್ಕಾರದ ಖಜಾನೆಗೆ ಭಾರೀ ಹೊಡೆತೆ ಬೀಳುತ್ತಿದೆ. ಇದನ್ನು ತಪ್ಪಿಸಲು ಇದೀಗ ಸರ್ಕಾರ ಭರ್ಜರಿ ಸರ್ಜರಿ ಆರಂಭಿಸಿದ್ದು, ಮೂರು ತಿಂಗಳಿನಿಂದ ಪಿಂಚಣಿ ಹಣ ಜಮೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳು ಕಂಗಾಲಾಗಿ ದಿನ ನಿತ್ಯ ಬ್ಯಾಂಕ್, ಪೋಸ್ಟ್ ಆಫೀಸ್ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ, ಸಂಧ್ಯಾ ಸುರಕ್ಷಾ, ಅಂಗವಿಕಲರಿಗೆ ನೀಡುತ್ತಿದ್ದ ಪಿಂಚಣಿ ಮೂರು ತಿಂಗಳಿನಿಂದ ಬಂದಿಲ್ಲ. ಇದರಿಂದ ಆತಂಕಗೊಂಡಿರುವ ಫಲಾನುಭವಿಗಳು ದಿಕ್ಕು ತೋಚದಂತಾಗಿದ್ದಾರೆ. ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಯಡಿ 76.43 ಲಕ್ಷ ಪಿಂಚಣಿ ಫಲಾನುಭವಿಗಳಿದ್ದು, ಈ ಪೈಕಿ 16 ಲಕ್ಷ ಜನರನ್ನು ವಿವಿಧ ಕಾರಣಗಳಿಂದ ಪಿಂಚಣಿ ಯೋಜನೆಯಿಂದಲೇ ಸರ್ಕಾರ ಕೈಬಿಟ್ಟಿದೆ ಎಂಬ ಮಾಹಿತಿ ಇದೆ. ಅನರ್ಹರ ಪತ್ತೆಗಾಗಿ ಪಿಂಚಣಿ ಹಾಕದೆ ಇರುವುದು ಪಿಂಚಣಿ ಹಣವನ್ನೇ ಅವಲಂಬಿಸಿರುವವರಿಗೆ ತೊಂದರೆಯಾಗುತ್ತಿದೆ. ಆದರೆ, ಕೆಲವು ಕಡೆಗಳಲ್ಲಿ ಹಂತ ಹಂತವಾಗಿ ಪಿಂಚಣಿ ಜಮೆ ಆಗುತ್ತಿದೆ ಎಂಬ ಮಾಹಿತಿಯೂ ಇದೆ.
ಪ್ರತಿ ತಿಂಗಳು ಸರ್ಕಾರ 76.43 ಲಕ್ಷ ಜನರಿಗೆ ಪಿಂಚಣಿಗಾಗಿ ಸರ್ಕಾರ 1000 ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ, ಅದೇಷ್ಟೋ ವರ್ಷಗಳಿಂದ ಅನರ್ಹರು ಯೋಜನೆಗಳ ಲಾಭ ಪಡೆಯುತ್ತಿರುವ ಕಾರಣ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಇದನ್ನು ಮನಗಂಡು ಸರ್ಕಾರ ಸರ್ಜರಿಗೆ ಮುಂದಾಗಿದೆ.
ಕಾರಣವೇನು?: ಪಿಂಚಣಿ ಸ್ಥಗಿತಗೊಳ್ಳಲು ಹಲವು ಕಾರಣಗಳಿವೆ. ನಕಲಿ ದಾಖಲೆ ಸಲ್ಲಿಸಿರುವುದು, ಮೃತಪಟ್ಟವರು ಪಿಂಚಣಿ ಪಡೆಯುತ್ತಿರುವುದು, ವಯಸ್ಸಿನ ಮಿತಿಯಲ್ಲಿ ವ್ಯತ್ಯಾಸವಿರುವುದು, ಆದಾಯ ತೆರಿಗೆ ಪಾವತಿದಾರರಾಗಿರುವುದು ಅಥವಾ ಬೇರೆ ಮೂಲಗಳಿಂದ ಪಿಂಚಣಿ ಪಡೆಯುತ್ತಿರುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಅನರ್ಹರನ್ನು ಗುರುತಿಸಿ ಪಿಂಚಣಿ ಬಂದ್ ಮಾಡಲಾಗಿದೆ. ಆದರೆ, ಅರ್ಹ ಫಲಾನುಭವಿಗಳು ಪಿಂಚಣಿ ಇಲ್ಲದೆ ನೋವುನ್ನುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 1,38,215 ಜನರ ಪಿಂಚಣಿ ರದ್ದಾಗಿದೆ. 

ವಯಸ್ಸಿನ ದಾಖಲಾತಿಗೆ ಪರದಾಟ

ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಪಡೆಯಬೇಕಾದರೆ 65 ವಯಸ್ಸಾಗಿರಬೇಕು. ಆದರೆ, ಕೆಲವರು ನಕಲಿ ವಯಸ್ಸಿನ ದಾಖಲೆ ಸಲ್ಲಿಸಿ ಪಿಂಚಣಿ ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಅನರ್ಹರ ಜತೆ ಕೆಲವು ಅರ್ಹರೂ ಪಿಂಚಣಿನಿಂದ ವಂಚಿತರಾಗಿದ್ದಾರೆ. ಇಂತಹವರು ವಯಸ್ಸಿನ ದಾಖಲೆಗಾಗಿ ಶಾಲಾ ದಾಖಲಾತಿ ನೀಡಬೇಕು ಎಂದು ಹೇಳಲಾಗಿದೆ. ಆದರೆ, ಕೆಲವು ಶಾಲೆ ಮೆಟ್ಟಿಲನ್ನೂ ಹತ್ತಿಲ್ಲ. ಇಂತಹವರು ಜಿಲ್ಲಾ ಸರ್ಜನ್‌ರಿಂದ ವಯಸ್ಸಿನ ದಾಖಲಾತಿ ಪಡೆಯಬೇಕಾಗಿದೆ. ಆದರೆ, ವಯಸ್ಸಾದ ಜೀವಗಳು ದಾಖಲಾತಿ ಪಡೆಯಲು ಪರದಾಡುತ್ತಿದ್ದಾರೆ.

ಪಿಂಚಣಿದಾರರ ವಿವರ

ವೃದ್ಧಾಪ್ಯ 18,77,747, ವಿಧವಾ 17,54,372, ಅಂಗವಿಕಲರು 89,0437, ಸಂಧ್ಯಾ ಸುರಕ್ಷಾ 29,38,067, ಮನಸ್ವಿನಿ 1,38,728, ಮೈತ್ರಿ 1992, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಮೃತ ರೈತರ ಪತ್ನಿಗೆ 5853, ಆ್ಯಸಿಡ್ ದಾಳಿಗೆ ಒಳಗಾದ ಮಹಿಳಯರು 51, ಎಂಡೋಸ್ಪಾನ್ ಸಂತ್ರಸ್ತರು 6412, ಸ್ವಾತಂತ್ರೃ ಹೋರಾಟಗಾರರು 2523, ಗೋವಾ ಸ್ವಾತಂತ್ರೃ ಹೋರಾಟಗಾರರು ಮತ್ತು ಕುಟುಂಬ 577, ಮಾಜಿ ದೇವದಾಸಿರು 27,000 ಹೀಗೆ ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ 76,43,759 ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ.
"

ಮೂರು ತಿಂಗಳಿನಿಂದ ಪಿಂಚಣಿ ಹಣ ಬಂದಿಲ್ಲ. ಇದರಿಂದ ಬಾಳ್ ತೊಂದರೆಯಾಗಿದೆ. ಸರ್ಕಾರ ನೀಡೋ ಹಣವೇ ನನಗೆ ಆಸರೆ. ಹಣಕ್ಕಾಗಿ ದಿನ ಅಲೆದಾಡುವುದೆ ಆಗಿದೆ.

— ಪುಷ್ಪಾ, ಪಿಂಚಣಿ ಫಲಾನುಭವಿ