ಪುಷ್ಪಾವತಿ ಮೇದಾರ  
ಧಾರವಾಡ

ಪಿಡಿಒ ಪುಷ್ಪಾವತಿ ಮೇದಾರ ಅಮಾನತು

ಮಂಜುನಾಥ ಅಂಗಡಿ
ಧಾರವಾಡ: ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ತಾಲೂಕಿನ ಹಳ್ಳಿಗೇರಿ ಪಿಡಿಒ ಪುಷ್ಪಾವತಿ ಮೇದಾರ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಗುರುವಾರ ಆದೇಶಿಸಿದ್ದಾರೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಕಲಘಟಗಿ ಕ್ಷೇತ್ರ ವ್ಯಾಪ್ತಿಯ ದೇವರಹುಬ್ಬಳ್ಳಿ ಮತ್ತು ಕಲಕೇರಿ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ಜರುಗಿಸಿದ್ದರು. ಈ ವೇಳೆ ಹಳ್ಳಿಗೇರಿ ಮತ್ತು ಸುತ್ತಲಿನ ಗ್ರಾಮಸ್ಥರು ಸಚಿವರನ್ನು ಭೇಟಿ ಮಾಡಿ ಪಿಡಿಒ ಪುಷ್ಪಾವತಿ ಮೇದಾರ ವಿರುದ್ಧ ದೂರು ನೀಡಿದ್ದರು. ಕೂಲಿ ಕಾಮಿರ್ಕರಿಗೆ ಕೆಲಸ ನೀಡದಿರುವುದು, ಇ ಸ್ವತ್ತು ಉತಾರ ವಿತರಣೆಯಲ್ಲಿ ವಿಳಂಬ ಸೇರಿ ಇನ್ನಿತರ ದೂರು ನೀಡಿದ್ದರು. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸಚಿವ ಲಾಡ್​ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿದ್ದರು. ಇದನ್ನು ಪರಿಗಣಿಸಿ ಪಿಡಿಒ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ಸಿಇಒ ಆದೇಶಿಸಿದ್ದಾರೆ.