ಹುಬ್ಬಳ್ಳಿ : ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವರೂರು ನವಗ್ರಹ ತೀರ್ಥಕ್ಷೇತ್ರದ ರಾಷ್ಟ್ರಸಂತ, ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಹುಬ್ಬಳ್ಳಿ ದಿಗಂಬರ ಜೈನ ಸಮಾಜದವರು ಗೋಕಾಕನಿಂದ ಬೆಳಗಾವಿಯ ಸುವರ್ಣ ಸೌಧದವರೆಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ, ಜೈನ ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದರೂ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸತ್ತು ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗದ ಎಚ್ಚರಿಕೆ ನೀಡಿದ್ದಾರೆ. ಆಚಾರ್ಯರು ತಮ್ಮ ಈ ನಿರ್ಧಾರವನ್ನು ಕೈಬಿಡುವಂತೆ ಸಮಾಜದ ವತಿಯಿಂದ ಪ್ರಾರ್ಥಿಸಿದ್ದೇವೆ ಎಂದರು.
ಜೈನ ಅಭಿವೃದ್ಧಿ ನಿಗಮ, ಪಾದಯಾತ್ರೆ ಕೈಗೊಳ್ಳುವ ಜೈನ ಸಾಧು, ಸಾಧಿ್ವುರಿಗೆ ತಂಗುದಾಣದ ವ್ಯವಸ್ಥೆ ಹಾಗೂ ಸೂಕ್ತ ರಕ್ಷಣೆ, ಸಮ್ಮೇದಗಿರಿ ದರ್ಶನಕ್ಕೆ ಆರ್ಥಿಕ ನೆರವು, ಜೈನ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ಪ್ರಮಾಣ ಪತ್ರ ಸರಳೀಕರಣದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ಅಹಿಂಸಾತ್ಮಕವಾಗಿ ಪ್ರತಿಭಟನೆ ಕೈಗೊಳ್ಳುವುದಾಗಿ ತಿಳಿಸಿದರು.
ವಿಮಲ ತಾಳಿಕೋಟಿ, ಆರ್.ಟಿ. ತವನಪ್ಪನವರ, ಸುಹಾಸ ಜವಳಿ, ಶಾಂತಿನಾಥ ಹೋತಪೇಟ ಸುದ್ದಿಗೋಷ್ಠಿಯಲ್ಲಿ ಇದ್ದರು.