ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆಯರ ಪ್ರತಿಭಟನೆ.
ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಹಗುರವಾಗಿ ಮಾತನಾಡಿದ್ದನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಽಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ದೇವತೆ ರೂಪದಲ್ಲಿ ಕಾಣಲಾಗುತ್ತದೆ. ಭಾರತದ ಹಣಕಾಸು ಖಾತೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಗೌರವ ಕೊಡುವುದನ್ನು ಬಿಟ್ಟು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು, `ಅವಳು, ಇವಳು' ಎಂದು ಮಾತನಾಡುವ ಮೂಲಕ ತಮ್ಮ ಸಂಸ್ಕೃತಿ ತೋರಿಸಿದ್ದಾರೆ. ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಬಗ್ಗೆಯೂ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದಾರೆ. ಮಹಿಳೆಗೆ ಗೌರವ ಕೊಡುವುದನ್ನು ಸಿದ್ದರಾಮಯ್ಯ ಮೊದಲು ಕಲಿಯಬೇಕು. ಕೂಡಲೇ ಅವರು ಸೀತಾರಾಮನ್ ಅವರಲ್ಲಿ ಕ್ಷಮೆಯಾಚಿಸಿ ಎಂದು ಒತ್ತಾಯಿಸಿದರು.
ಹು-ಧಾ ಮಹಾನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಲದ್ವಾ, ಶೋಭಾ ನಿಸ್ಸೀಮಗೌಡ, ಪೂರ್ಣಾ ಪಾಟೀಲ, ಸವಿತಾ ಅಮರಶೆಟ್ಟಿ, ರಾಜೇಶ್ವರಿ ಸಾಲಗಟ್ಟಿ, ಮಾಲತಿ ಹುಲಕೋಟಿ, ರೂಪಾ ಚೌದರಿ, ನಾಗರತ್ನಾ ಬಳ್ಳಾರಿ, ಅಕ್ಕಮ್ಮ ಹೆಗಡೆ, ಪುಷ್ಪಾ ನವಲಗುಂದ, ನಾಗಲಕ್ಷ್ಮಿಕುಲಕರ್ಣಿ, ರೂಪಾ ಬೊಂಗಾಳೆ, ಸವಿತಾ ಚೌವ್ಹಾಣ, ಸರೋಜಾ ಛಬ್ಬಿ, ಸುಮಾ ಶಿವನಗೌಡರ ಇತರರಿದ್ದರು.