ವಿಶ್ವ ಅಂಗಾಂಗದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ 
ಧಾರವಾಡ

ಅಂಗಾಂಗದಾನ ಸಾವಿನ ನಂತರವೂ ಜೀವನ ನೀಡುವ ಮಹಾದಾನ

ಧಾರವಾಡ: ಅಂಗಾಂಗ ದಾನವು ಮತ್ತೊಬ್ಬರ ಜೀವ ಉಳಿಸುವ ಅತ್ಯಂತ ಮಹತ್ವದ ಮಾನವೀಯ ಕಾರ್ಯವಾಗಿದೆ. ಒಬ್ಬ ದಾನಿಯ ಅಂಗಗಳು ಹಲವು ಜನರ ಜೀವ ಉಳಿಸಲು ಸಹಾಯ ಮಾಡಬಹುದು. ಆದ್ದರಿಂದ ಅಂಗಾಂಗದಾನ ಸಾವಿನ ನಂತರವೂ ಜೀವನ ನೀಡುವ ಮಹಾದಾನ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್. ಕೆ. ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ, ಜಿಲ್ಲಾ ಐ.ಇ.ಸಿ. ವಿಭಾಗ ಸಹಯೋಗದೊಂದಿಗೆ ಕ್ಲಾಸಿಕ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ ಧಾರವಾಡದಲ್ಲಿ ನಡೆದ ವಿಶ್ವ ಅಂಗಾಂಗದಾನಿಗಳ ದಿನ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಇಲಾಖೆಯ ನಿರಂತರ ಜಾಗೃತಿ ಅಭಿಯಾನದ ಫಲವಾಗಿ ರಾಜ್ಯದಲ್ಲಿ ಧಾರವಾಡ ಜಿಲ್ಲೆ 12,534 ಜನರು ನೋಂದಣಿ ಮಾಡಿಸಿದ್ದು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಇಂದಿನ ಆಧುನಿಕ ಯುಗದಲ್ಲಿ ಅನೇಕ ವ್ಯಕ್ತಿಗಳು ತೀವ್ರ ಸ್ವರೂಪದ ಅಂಗಾಂಗ ವೈಫಲ್ಯದಿಂದ (ಹೃದಯ, ಯಕೃತ್ತು, ಮೂತ್ರಪಿಂಡ ಇತ್ಯಾದಿ) ಬಳಲುತ್ತಿದ್ದು, ಸೂಕ್ತ ಸಮಯದಲ್ಲಿ ದಾನಿಗಳಿಂದ ಅಂಗಗಳು ಮತ್ತು ಮರಣಾ ನಂತರವೂ ನಮ್ಮ ದೇಹದ ಅಂಗಗಳನ್ನು ದಾನಮಾಡುವ ಮೂಲಕ ಇತರರಿಗೆ ಮರುಜೀವ ನೀಡಲು ಸಾರ್ವಜನಿಕರು ಮುಂದೆ ಬರಬೇಕು.
ಪ್ರತಿಯೊಬ್ಬರೂ ತಮ್ಮ ಕುಟುಂಬದ ಸದಸ್ಯರೊಂದಿಗೆ ಅಂಗಾಂಗ ದಾನದ ಕುರಿತು ಚರ್ಚಿಸಿ, ದಾನದ ಮಹತ್ವವನ್ನು ಅರಿತುಕೊಳ್ಳಬೇಕು, ಅಂಗಾಂಗ ದಾನವು ಕೇವಲ ಒಂದು ದಾನವಲ್ಲ, ಅದು ಮತ್ತೊಬ್ಬರ ಬದುಕಿಗೆ ಹೊಸ ಅವಕಾಶ ನೀಡುವ ಮಹಾದಾನವಾಗಿದೆ ಎಂದು ಅವರು ಹೇಳಿದರು.
ಒಬ್ಬ ವ್ಯಕ್ತಿಯು ಮರಣಾ ನಂತರ ಅಂಗಾಂಗ ದಾನ ಮಾಡುವುದರಿಂದ ಬಡ ಹಾಗೂ ಅಶಕ್ತರಾದ ಸುಮಾರು 8 ಜನರ ಜೀವಗಳನ್ನು ಉಳಿಸಬಹುದಾಗಿದೆ. ಅಂಗಾಂಗ ದಾನವು ಕೇವಲ ವೈದ್ಯಕೀಯ ಪ್ರಕ್ರೀಯೆಯಲ್ಲ ಅದೊಂದು ಮಾನವೀಯತೆಯ ಮಹಾನ ಸೇವೆ ಹಾಗೂ ಮನುಕುಲಕ್ಕೆ ನೀಡುವ ಅತ್ಯಮೂಲ್ಯ ಕೊಡುಗೆಯಾಗಿದೆ. ಅಂಗಾಂಗದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರಮಾಡಿ, ವೈಜ್ಞಾನಿಕ ಹಾಗೂ ಕಾನೂನುಬದ್ದ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಲಾಸಿಕ್ ಡಿಗ್ರಿ ಕಾಲೇಜ ಪ್ರಾಂಶುಪಾಲರಾದ ಪಿ.ಎಮ್.ಹೊನಕೇರಿ, ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅಂಗಾಂಗ ದಾನ ಮಾಡಿ, ಜೀವ ಉಳಿಸಿ. ಸಾವಿನ ನಂತರವೂ ಮತ್ತೊಬ್ಬರ ಬದುಕಿನಲ್ಲಿ ಬೆಳಕಾಗಿ ಎಂಬ ಸಂದೇಶ ನೀಡಿ, ಅಂಗಾಂಗದಾನದ ಜಿಲ್ಲಾ ಸಂಯೋಜಕರಾದ ಪ್ರೀಯಾಂಕಾ ಅವರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿತೆ ಮಾಡುವ ಮೂಲಕ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳುವ ಪ್ರಕ್ರೀಯೆ ಕುರಿತು ತಿಳಿಸಿಕೊಟ್ಟರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಧಾ ತಿವಾರಿ ಸ್ವಾಗತಿಸಿ, ನಿರೂಪಿಸಿದರು. ಕಾವೇರಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಸಂಜಯ ಡುಮ್ಮಗೋಳ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ರವೀಂದ್ರ ಬೊವೇರ, ತಾಲೂಕಾ ಆರೋಗ್ಯಾಧಿಕಾರಿ ಡಾ. ತನುಜಾ ಕೆ.ಎನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎನ್ ಅಗಡಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶೋಭಾ ಕುಲಕರ್ಣಿ, ಕ್ಲಾಸಿಕ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.