ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಸರ್ಕಾರಿ ಗುಡ್ಡದಲ್ಲಿ ಬಯೋಗ್ಯಾಸ್​ ಘಟಕ ನಿರ್ಮಾಣ ಕಾಮಗಾರಿ ವಿರೋಧಿಸಿ ಗ್ರಾಮಸ್ಥರು ಗಿಡಗಳನ್ನು ನೆಟ್ಟರು. 
ಧಾರವಾಡ

ಬಯೋಗ್ಯಾಸ್​ ಟಕ ನಿರ್ಮಾಣಕ್ಕೆ ವಿರೋಧ

ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದ ಸರ್ಕಾರಿ ಗುಡ್ಡದಲ್ಲಿ ಬಯೋಗ್ಯಾಸ್​ ಘಟಕ ನಿರ್ಮಾಣ ಕಾಮಗಾರಿ ವಿರೋಧಿಸಿ ಗ್ರಾಮಸ್ಥರು ಅದೇ ಗುಡ್ಡದಲ್ಲಿ ಗಿಡಗಳನ್ನು ನೆಟ್ಟು ಸೋಮವಾರ ಪ್ರತಿಭಟಿಸಿದರು.

ಕೈಯಲ್ಲಿ ಸಸಿ ಹಿಡಿದು ಬಂದ ಗ್ರಾಮಸ್ಥರು ಪಾಲಿಕೆಯ ವಿರುದ್ಧ ಧಿಕ್ಕಾರ ಕೂಗಿದರು. ಬಯೋಗ್ಯಾಸ್​ ಘಟಕ ನಿರ್ಮಾಣ ಬೇಡ ಎಂದು ಮೊದಲಿನಿಂದಲೂ ವಿರೋಧಿಸುತ್ತಿದ್ದರೂ ಪಾಲಿಕೆ ಗ್ರಾಮಸ್ಥರ ಅಳಲು ಕೇಳುತ್ತಿಲ್ಲ. ಅಲ್ಲದೆ, ಸರ್ಕಾರಿ ಗುಡ್ಡದಲ್ಲಿದ್ದ ಅನೇಕ ಮರಗಳನ್ನು ಕಡಿದು ಹಾಕಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 500ಕ್ಕೂ ಹೆಚ್ಚು ಜನ ಟ್ರ್ಯಾಕ್ಟರ್​ನಲ್ಲಿ ಸಸಿಗಳು ಹಾಗೂ ನೀರಿನ ಟ್ಯಾಂಕರ್​ಗಳೊಂದಿಗೆ ಘಟಕದ ಒಳಗೆ ಹೋಗಲು ಯತ್ನಿಸಿದರು. ಆದರೆ, ಘಟಕದ ಎದುರು ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ಸ್ವತಃ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಸ್ಥಳದಲ್ಲಿದ್ದು, ಎಲ್ಲರನ್ನೂ ಒಳಗೆ ಬಿಡುವುದಿಲ್ಲ. ಸಸಿ ನೆಡಲು 15 ಜನರಿಗೆ ಮಾತ್ರ ಅವಕಾಶ ಕೊಡುತ್ತೇವೆ ಎಂದರು. ಬಯೋಗ್ಯಾಸ್​ ನಿರ್ಮಾಣಕ್ಕೆ ವಿರೋಧವಾದಾಗಿನಿಂದ ಯಾವುದೇ ಕಾಮಗಾರಿ ನಡೆಸಿಲ್ಲ ಎಂದು ಘಾಳಿ ಮನವರಿಕೆ ಮಾಡಿದರು. ಇದನ್ನು ಒಪ್ಪದ ಜನ ಎಲ್ಲರೂ ಘಟಕದ ಒಳಗೆ ಸಸಿ ನೆಡುತ್ತೇವೆ ಎಂದು ಪಟ್ಟು ಹಿಡಿದರು. ಪೊಲೀಸರು ಇದಕ್ಕೆ ಅವಕಾಶ ನೀಡದಿದ್ದಾಗ ಸುಮಾರು 15 ಜನರಿಗೆ ಮಾತ್ರ ಸಸಿ ನೆಡಲು ಅವಕಾಶ ಮಾಡಿಕೊಟ್ಟರು.