shelter ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ. 
ಧಾರವಾಡ

ಬಾಂಗ್ಲಾ ನುಸುಳುಕೋರರಿಗೆ ಅಧಿಕಾರಿಗಳ ಆಶ್ರಯ shelter

ಪ್ರಮುಖ ಮುಖ್ಯಾಂಶಗಳು

  • ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಆರೋಪ
  • ಅಕ್ರಮ ವಲಸಿಗರನ್ನು ಹೊರಹಾಕುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮೆಚ್ಚುಗೆ
  • ಅಧಿಕಾರಿಗಳು ಯಾಕೆ ಸುಳ್ಳು ಹೇಳಿದರು ?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಜಿಲ್ಲೆಗಳಲ್ಲಿ ಎಷ್ಟು ಜನ ಬಾಂಗ್ಲಾ ಅಕ್ರಮ ನುಸುಳುಕೋರರು ಇದ್ದಾರೆ ಎಂಬ ಮಾಹಿತಿಯನ್ನು ಪ್ರತಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಡಳಿತವನ್ನು ಮಾಹಿತಿ ಹಕ್ಕು ಆಧಾರದಡಿ ಕೇಳಲಾಗಿತ್ತು ಎಂದು ಹೇಳಿದರು.
ರಾಜ್ಯದ ಬಹುತೇಕ ಜಿಲ್ಲೆಗಳಿಂದ ಬಂದಿರುವ ಉತ್ತರದ ಪ್ರಕಾರ, ಯಾವುದೇ ಜಿಲ್ಲೆಯಲ್ಲಿ ಬಾಂಗ್ಲಾ ಅಕ್ರಮ ನುಸುಳುಕೋರರು ಇಲ್ಲ.

ಆದರೆ, ಇದೀಗ ರಾಜ್ಯ ಸರ್ಕಾರ ನುಸುಳುಕೋರರನ್ನು ಪತ್ತೆ ಹಚ್ಚಿ ಹೊರಗೆ ಕಳುಹಿಸುತ್ತಿದೆ. ಹಾಗಾದರೆ, ಅಧಿಕಾರಿಗಳು ಯಾಕೆ ಸುಳ್ಳು ಹೇಳಿದರು ? ಎಂದು ಪ್ರಶ್ನಿಸಿದರು.

ಬಾಂಗ್ಲಾ ನುಸುಳುಕೋರರಿಗೆ ಸಹಕಾರ ನೀಡುತ್ತಿದ್ದ ಅಧಿಕಾರಿಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ರಮ ವಲಸಿಗರಿಗೆ ಬೆಂಬಲ ನೀಡುವುದೆಂದರೆ ದೇಶದ್ರೋಹದ ಕೆಲಸ ಎಂದರು.

ಬಾಂಗ್ಲಾ ನುಸುಳುಕೋರರು ಕನ್ನಡಿಗರ ಉದ್ಯೋಗ ಕಿತ್ತುಕೊಳ್ಳುತ್ತಿದ್ದಾರೆ. ಕಳ್ಳತನ, ದರೋಡೆ, ಡ್ರಗ್ ಮಾಫಿಯಾ, ಅತ್ಯಾಚಾರದಂತಹ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಬಾಂಗ್ಲಾ ನುಸುಳುಕೋರ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದ ಎಂದು ಕಳವಳ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯಲ್ಲಿ ಬಾಂಗ್ಲಾದ ನೂರಾರು ಜನ ನುಸುಳುಕೋರರಿಗೆ ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದ ಅಧಿಕಾರಿಯನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

ಈ ಹಿಂದಿನ ಬಿಜೆಪಿ ಸರ್ಕಾರ ಮಾಡದ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಅಕ್ರಮ ನುಸುಳುಕೋರರನ್ನು ಹೊರಗೆ ಹಾಕುವ ಕಾರ್ಯಕ್ಕೆ ಕೈ ಹಾಕಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ವಿಷಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೂ ಬಾಂಗ್ಲಾ ನುಸುಳುಕೋರರು ರಾಜ್ಯದಲ್ಲಿ ಇದ್ದರು. ಆದರೆ, ಆ ಸರ್ಕಾರ ನುಸುಳುಕೋರರನ್ನು ಹೊರ ಹಾಕಲು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.

ದೊಡ್ಡ ಮಾತುಗಳನ್ನು ಆಡುವ ಬಿಜೆಪಿ ಮುಖಂಡರಿಗೆ ಬಾಂಗ್ಲಾ ನಿವಾಸಿಗಳು ಕಾಣಿಸಲಿಲ್ಲವೇ ? ಎಂದು ಪ್ರಶ್ನೆ ಮಾಡಿದರು.

ಈ ಕೆಲಸ ಮುಂಚೆಯೇ ಆಗಬೇಕಿತ್ತು. ತಡವಾದರೂ ಸರಿ, ಸರ್ಕಾರ ಎಚ್ಚೆತ್ತುಕೊಂಡಿದೆ.

ಅಕ್ರಮ ವಲಸಿಗರನ್ನು ಹೊರ ಹಾಕುವ ಕಾರ್ಯವನ್ನು ರಾಜ್ಯ ಸರ್ಕಾರ ನಿರಂತರವಾಗಿ ಮುಂದುವರೆಸಬೇಕು.

ದೇಶದ್ರೋಹಿಗಳಿಗೆ ಕರ್ನಾಟಕದಲ್ಲಿ ನೆಲೆ ಊರಲು ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರವು ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಪತ್ತೆ ಹಚ್ಚಿ, ದೇಶದಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು.

ಶ್ರೀರಾಮ ಸೇನೆಯ ವೀರಯ್ಯ ಸಾಲಿಮಠ, ಬಸವರಾಜ ದುರ್ಗದ, ಗಣೇಶ ಲದ್ವಾ, ಅಣ್ಣಪ್ಪ ದಿವಟಗಿ ಉಪಸ್ಥಿತರಿದ್ದರು.