nwksrtc protest ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಾಕಿ ಉಳಿದ 814 ಚಾಲಕ-ನಿರ್ವಾಹಕ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡುವಂತೆ ಆಗ್ರಹಿಸಿ ನೊಂದ ಅಭ್ಯರ್ಥಿಗಳು ಹುಬ್ಬಳ್ಳಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. 
ಧಾರವಾಡ

nwksrtc protest ಹುದ್ದೆ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ nwksrtc protest ಬಾಕಿ ಉಳಿದ 814 ಚಾಲಕ-ನಿರ್ವಾಹಕ ಹುದ್ದೆಗಳನ್ನು ತಕ್ಷಣವೇ ಭರ್ತಿಗೆ ಆಗ್ರಹಿಸಿ ನೊಂದ ಅಭ್ಯರ್ಥಿಗಳು ಇಲ್ಲಿಯ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ಮಂಗಳವಾರ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದರು.
ಸಾಮಾಜಿಕ ಕಾರ್ಯಕರ್ತ ಸುಭಾಷಸಿಂಗ್ ಜಮಾದಾರ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 2,814 ಚಾಲಕ/ ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು 2019ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಮೊದಲ ಹಂತದಲ್ಲಿ ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿತ್ತು. ಉಳಿದ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಮತ್ತೆ ಸಾವಿರ ಹುದ್ದೆಗಳನ್ನು ಜನವರಿಯಲ್ಲಿ ಭರ್ತಿ ಮಾಡಿಕೊಂಡಿತ್ತು. ಇನ್ನೂ 814 ಹುದ್ದೆಗಳನ್ನು ಭರ್ತಿ ಮಾಡಿಕೊಂಡಿಲ್ಲ. ಸುಮಾರು 20 ಸಾವಿರ ಅಭ್ಯರ್ಥಿಗಳು ಅರ್ಜಿ ಗುಜರಾಯಿಸಿದ್ದಾರೆ. ಬಡ ಕುಟುಂಬಗಳು ಹುದ್ದೆ ನಂಬಿ ಕಣ್ಣೀರಲ್ಲಿ ಕೈತೊಳೆದುಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇಷ್ಟಾದರೂ ಸಾರಿಗೆ ಸಚಿವ ಭೈರತಿ ಸುರೇಶ ಅವರು ಹೋರಾಟಗಾರರ ಅಳಲು ಕೇಳುತ್ತಿಲ್ಲ. ಹೋರಾಟಗಾರರ ನೋವು ರಾಜ್ಯ ಸರ್ಕಾರಕ್ಕೆ ಮುಟ್ಟುವವರೆಗೆ ಹೋರಾಟ ಕೈ ಬಿಡುವುದಿಲ್ಲ. ಶಾಂತಿಯುತ ಹೋರಾಟ ಮುಂದುವರಿಸುತ್ತೇವೆ ಎಂದರು.
ಪ್ರತಿಭಟನೆಗೂ ಮೊದಲು ಸ್ಥಳದಲ್ಲೇ ಸಭೆ ನಡೆಸಿದ ಅಭ್ಯರ್ಥಿಗಳು ಎರಡು ದಿನಗಳೊಳಗೆ ರಾಜ್ಯ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧಾರ ಕೈಗೊಂಡರು.
ಪ್ರಮುಖರಾದ ರವಿಕುಮಾರ ಹಾಸನ, ರಫೀಕ ಇಂಚಲ, ಫಕೀರಗೌಡ, ನವೀನ ಬಳಿಗಾರ, ಬಸವರಾಜ ಸಕ್ರಿ, ದೇವೇಂದ್ರ ಮಾಕಣ್ಣವರ, ರವಿ ಬೆಣ್ಣೆ, ಈರಣ್ಣ ಬಾಗಿ, ಬಸವರಾಜ ರಾಮಾಪುರ, ನೂತನ ಗಾಣಿಗೇರ, ಶ್ರೀಧರ ಹಿತ್ತಲಮನಿ, ಸಂತೋಷ ವೈ.ಆರ್., ಸುರೇಶ ಬ್ಯಾಲಿಹಾಳ ಸೇರಿದಂತೆ ಗದಗ, ಹಾವೇರಿ, ಕೊಪ್ಪಳ ಸೇರಿ ವಿವಿಧ ಜಿಲ್ಲೆಗಳ ನೂರಾರು ಅಭ್ಯರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.