nsui ಎನ್ ಎಸ್ ಯುಐ ಪದಾಧಿಕಾರಿಗಳು ಹುಬ್ಬಳ್ಳಿಯಲ್ಲಿ ಮಾತನಾಡಿದರು.
- ಎನ್ಟಿಎ ರದ್ದಿಗೆ ಎನ್ಎಸ್ಯುಐ ಆಗ್ರಹ
- ಹುಬ್ಬಳ್ಳಿಯಲ್ಲಿ ಜೂನ್ 2ರಂದು ಪ್ರತಿಭಟನೆ
ಹುಬ್ಬಳ್ಳಿ: nsui ನೀಟ್ ಹೆಸರಿನಲ್ಲಿ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಹೆಚ್ಚಿಸಲಾಗುತ್ತಿದ್ದು, ಪರೀಕ್ಷೆ ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ರದ್ದುಪಡಿಸಬೇಕೆಂದು ಜೂನ್ 2ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್ಯುಐ) ರಾಜ್ಯ ಕಾರ್ಯದರ್ಶಿ ವಿಶಾಲ ಮಾನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ ನೀಟ್ ಬರೆದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲು ಮಾಡಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 2023ರಲ್ಲಿ 13,892 ವಿದ್ಯಾರ್ಥಿಗಳು ಪರೀಕ್ಷೆಯೂ ಸೇರಿದಂತೆ ಬೇರೆಬೇರೆ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಇದು ಹೆಚ್ಚಳವಾಗುತ್ತ ಬಂದಿದೆ ಎಂದು ವಿಷಾದಿಸಿದರು.
ಒತ್ತಡದ ಕಾರಣದಿಂದಲೇ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ಕೆಟ್ಟ ಕೆಲಸಕ್ಕೆ ಇಳಿಯುತ್ತಿದ್ದಾರೆ. ಪರೀಕ್ಷೆ ನಡೆಸುವ ಎನ್ಟಿಎ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಯಾವ ಭರವಸೆ ಮೇಲೆ ಹಾಜರಾಗಬೇಕು. ಈ ಬಾರಿಯೂ ಅಕ್ರಮವಾಗುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ ಇದೆ ಎಂದು ಪ್ರಶ್ನಿಸಿದರು.
ವಿದ್ಯಾರ್ಥಿಗಳು ನ್ಯಾಯ ಕೇಳುತ್ತಿದ್ದಾರೆ. ಪ್ರತಿ ಬಾರಿ ಇಂತಹ ಘಟನೆಗಳು ಆದಾಗ ವಿದ್ಯಾರ್ಥಿ ಸಮೂಹ ಒತ್ತಡಕ್ಕೆ ಸಿಲುಕುತ್ತದೆ. ನೀಟ್ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಶಿಕ್ಷಣದಲ್ಲಿ ಸಮಾನ ಅವಕಾಶಗಳು ಸಿಗಬೇಕು ಎಂದು ಆಗ್ರಹಿಸಿದರು.
ಎನ್ಎಸ್ಯುಐ ಜಿಲ್ಲಾ ಕಾರ್ಯದರ್ಶಿ ಕಾರ್ತಿಕ ಕಾಡದೇವರಮಠ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ಜತೆ ಸರ್ಕಾರ ಆಟ ಆಡಬಾರದು. ವೈದ್ಯಕಿಯ ಪ್ರವೇಶಕ್ಕೆ ರಾಜ್ಯ ಸರ್ಕಾರವೇ ಸುವ್ಯವಸ್ಥಿತವಾಗಿ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುವರು ಎಂದರು.
ಮಹಾನಗರ ಜಿಲ್ಲಾ ಕಾರ್ಯದರ್ಶಿ ಕಲ್ಮೇಶ ಉಳ್ಳಾಗಡ್ಡಿ, ನವಲಗುಂದ ಅಧ್ಯಕ್ಷ ಚಂದ್ರಶೇಖರ ಕಂಬಳಿ ಇದ್ದರು.