ಧಾರವಾಡ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮತದಾರರ ಕರಡು ಪಟ್ಟಿಯಲ್ಲಿರುವ ಜಿಲ್ಲೆಯ 13,53,946 ಮತದಾರರಲ್ಲಿ 47,920 ಮತದಾರರಿಗೆ ಸೂಕ್ತ ದಾಖಲೆ ಒದಗಿಸುವಂತೆ ಅಧಿಕಾರಿಗಳು ನೋಟಿಸ್ ಜಾರಿಗೊಳಿಸುತ್ತಿದ್ದಾರೆ.
2002ರ ಮತದಾರರ ಪಟ್ಟಿಯ ಮ್ಯಾಪಿಂಗ್ನಲ್ಲಿ ವಿವರ ಸಿಗದ 13,950 ಜನರು ಹಾಗೂ ಮಾಹಿತಿಯಲ್ಲಿ ತಾಕಿರ್ಕ ವ್ಯತ್ಯಾಸ ಕಂಡು ಬಂದಿರುವ (ಎನಾಮಲಿಸ್) 33,969 ಮತದಾರರು ಸೇರಿ 47,920 ಜನರಿಗೆ ನೋಟಿಸ್ಗಳು ಜಾರಿಯಾಗುತ್ತಿವೆ. ಆ. 24ರಿಂದ ನೋಟಿಸ್ ನೀಡುವ ಪ್ರಕ್ರಿಯೆ ಶುರುವಾಗಿದ್ದು, ಸೆ.23ರವರೆಗೆ ನಡೆಯಲಿದೆ. ಈ ಕಾರ್ಯಕ್ಕಾಗಿ 63 ಹೆಚ್ಚುವರಿ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು, 11 ಜನ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳನ್ನು ನೇಮಿಸಲಾಗಿದೆ.
ನೋಟಿಸ್ ನೀಡಿ 7 ದಿನ ಕಾಲವಕಾಶ ನೀಡಲಾಗುತ್ತದೆ. 8ನೇ ದಿನ ವಿಚಾರಣೆ ನಡೆಸಿ, ಸೂಕ್ತ ದಾಖಲೆಗಳನ್ನು ಪಡೆಯಲಾಗುತ್ತದೆ. ಪ್ರತಿ ದಿನ 150 ಜನರಿಗೆ ನೋಟಿಸ್ ನೀಡಬಹುದು ಎಂದು ಕೇಂದ್ರ ಚುನಾವಣೆ ಆಯೋಗದ ನಿರ್ದೇಶನವಿದೆಯಾದರೂ ಧಾರವಾಡ ಜಿಲ್ಲೆಯಲ್ಲಿ ಪ್ರತಿದಿನ 35ರಿಂದ 45 ಜನರಿಗೆ ನೋಟಿಸ್ ನೀಡಿ ಅಚ್ಚು ಕಟ್ಟಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ನೋಟಿಸ್ ನೀಡುವ ಪ್ರಕ್ರಿಯೆ ಒಟ್ಟು 55 ದಿನಗಳ ವರೆಗೆ ನಡೆಯಲಿದೆ. ಅ. 22ರಂದು ಆಕ್ಷೇಪಣೆಗಳ ಅಂತಿಮವಾಗಿ ವಿಲೇವಾರಿ ಕಾರ್ಯ ನಡೆಯಲಿದೆ. ಅ. 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
2002ರ ಹಳೆಯ ಚುನಾವಣಾ ಪಟ್ಟಿಯ ದತ್ತಾಂಶದೊಂದಿಗೆ ಪ್ರಸ್ತುತ ಮತದಾರರ ಅಥವಾ ಅವರ ಪೋಷಕರ ವಿವರಗಳು ಹೊಂದಾಣಿಕೆಯಾಗಿಲ್ಲ. ಹೆಸರು, ವಯಸ್ಸು, ತಂದೆಯ ಹೆಸರು ಅಥವಾ ವಿಳಾಸದಲ್ಲಿ ಕಾಗುಣಿತ ದೋಷಗಳು, ಇನ್ನಿತರ ತಾಂತ್ರಿಕ ವ್ಯತ್ಯಾಸಗಳು ಕಂಡುಬಂದಿವೆ. ಗಣತಿ ಹಂತದಲ್ಲಿ ಮತದಾರರು ಸಲ್ಲಿಸಿದ ಅಜಿರ್ಗಳು ಅರ್ಪೂಣವಾಗಿರುವ ಕಾರಣಕ್ಕೆ ನೋಟಿಸ್ ಜಾರಿಗೊಳಿಸಲಾಗುತ್ತಿದೆ.
ನೋಟಿಸ್ ಬಂದರೆ ಗಾಬರಿ ಪಡಬೇಡಿ:
ನೋಟಿಸ್ ಬಂದ ತಕ್ಷಣ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿದೆ ಎಂದು ಗಾಬರಿಪಡುವ ಅಗತ್ಯವಿಲ್ಲ. ಇದು ಕೇವಲ ವಿವರಗಳ ದೃಢೀಕರಣಕ್ಕಾಗಿ ನೀಡುವ ನೋಟಿಸ್ ಆಗಿದೆ. ನೋಟಿಸ್ಗೆ ಪ್ರತಿಯಾಗಿ ಮತಗಟ್ಟೆ ಅಧಿಕಾರಿಗಳಿಗೆ ಜನನ ಪ್ರಮಾಣಪತ್ರ, ಕಾಯಂ ನಿವಾಸಿ ಪ್ರಮಾಣಪತ್ರದಂತಹ ಅಧಿಕೃತ ದಾಖಲೆಗಳನ್ನು ನೀಡಿ ವಿವರಗಳನ್ನು ದೃಢೀಕರಿಸಬೇಕು. ನೋಟಿಸ್ನಲ್ಲಿ ಉಲ್ಲೇಖಿಸಿರುವ ದಿನಾಂಕದಂದು ನಿಗದಿಪಡಿಸಿದ ಸ್ಥಳದಲ್ಲಿ ಚುನಾವಣಾ ನೋಂದಣಾಧಿಕಾರಿಗಳ ಮುಂದೆ ಹಾಜರಾಗಿ ದಾಖಲೆ ಸಲ್ಲಿಸಬಹುದು.
ಜಿಲ್ಲೆಯಲ್ಲಿದ್ದ ಒಟ್ಟು 16,21,961 ಮತದಾರರ ಪೈಕಿ 13,53,946 ಮತದಾರರು ಕರಡು ಪಟ್ಟಿಯಲ್ಲಿದ್ದಾರೆ. ಕರಡು ಮತದಾರರ ಪಟ್ಟಿಯಿಂದ 2,68,015 ಮತದಾರರು ಹೊರಗುಳಿದಿದ್ದಾರೆ. ಈ ಪೈಕಿ 52,791 ಮಂದಿ ಮೃತಪಟ್ಟಿದ್ದಾರೆ, 1,25,287 ಮತದಾರರು ಶಾಶ್ವತವಾಗಿ ವಲಸೆ ಹೋಗಿದ್ದಾರೆ. 27,185 ದ್ವಿಪ್ರತಿ, 62,079 ಗೈರು ಹಾಗೂ 673 ಇತರೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಸೆ.23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ ಸಂಬಂಧಿಸಿದ ಮತದಾರರ ನೋಂದಣಾಧಿಕಾರಿಗಳಿಗೆ, ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ, ಮತಗಟ್ಟೆ ಅಧಿಕಾರಿಗಳಿಗೆ ಅರ್ಹ ಮತದಾರರು ಸೂಕ್ತ ದಾಖಲೆಗಳೊಂದಿಗೆ ಅಜಿರ್ ಸಲ್ಲಿಸಬಹುದು.