ಧಾರವಾಡ: ಗ್ರಾಮೀಣ ಭಾಗದಲ್ಲಿ 30 ವರ್ಷ ಮೇಲ್ಪಟ್ಟ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುವ `ಗೃಹ ಆರೋಗ್ಯ ಯೋಜನೆ'ಯು ಅಧಿಕಾರಿಗಳ ಇಚ್ಛಾಶಕ್ತಿ, ಹೊಂದಾಣಿಕೆ ಕೊರತೆಯಿಂದ ಸಂಪೂರ್ಣ ದಾರಿ ತಪ್ಪಿದೆ.
ವೈದ್ಯರು, ನರ್ಸ್ಗಳು ಹಾಗೂ ಆಶಾ ಕಾರ್ಯಕರ್ತೆಯರು ಒಟ್ಟಾಗಿ ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಮಾಡಿ, ಅನಾರೋಗ್ಯವಿದ್ದರೆ ಸೂಕ್ತ ಚಿಕಿತ್ಸೆಗೆ ಸಲಹೆ ಹಾಗೂ ಅಗತ್ಯ ಔಷಧಿ ಪೂರೈಸುವುದಕ್ಕೆ ಸರ್ಕಾರ ಕಳೆದ ಜುಲೈ ತಿಂಗಳಲ್ಲಿ ಯೋಜನೆ ಜಾರಿಗೊಳಿಸಿತ್ತು. ಆರಂಭದ ಕೆಲ ದಿನ ಸರಿಯಾಗಿ ನಡೆದು, ನಂತರದಲ್ಲಿ ಬೇರೆ ಕೆಲಸಗಳ ನೆಪ ಹೇಳಿ ವೈದ್ಯರು, ನರ್ಸ್ಗಳು ತೆರಳುತ್ತಿಲ್ಲ.ಹೀಗಾಗಿ ಆಶಾ ಕಾರ್ಯಕರ್ತೆಯರ ಹೆಗಲೇರಿ ಯೋಜನೆ ಹಾದಿ ತಪ್ಪುತ್ತಿದೆ. ಬಹಳಷ್ಟು ಗೃಹಗಳಿಗೆ ಈ ಯೋಜನೆಯ ಲಾಭವೇ ತಲುಪಿಲ್ಲ. ಜತೆಗೆ `ಗೃಹ ಆರೋಗ್ಯ ಯೋಜನೆ' ಬಗ್ಗೆ ಅರಿವೂ ಇಲ್ಲವಾಗಿದೆ.
ಆಶಾಗಳೇ ಪ್ರಾಥಮಿಕ ಮಾಹಿತಿಗಾರರಾಗಿದ್ದು ದುರಂತ:
ರಕ್ತದೊತ್ತಡ, ಮಧುಮೇಹ, ಬಾಯಿ, ಸ್ಥನ ಮತ್ತು ಗರ್ಭಕೋಶ ಕ್ಯಾನ್ಸರ್ ತಪಾಸಣೆ, ಮಾನಸಿಕ ಆರೋಗ್ಯ ಪರಿಸ್ಥಿತಿ ಸೇರಿ 14 ರೀತಿಯ ತಪಾಸಣೆ ನಡೆಸಬೇಕು ಎನ್ನುವುದು ಯೋಜನೆಯ ಮೂಲ ಉದ್ದೇಶ. ಆದರೆ, ಸದ್ಯಕ್ಕೆ ನಡೆಯುತ್ತಿರುವುದು ದಿಢೀರ್ ಮಧುಮೇಹ ಪರೀಕ್ಷೆ ಮತ್ತು ರಕ್ಕದೊತ್ತಡ ಮಾತ್ರ. ಆಶಾ ಕಾರ್ಯಕರ್ತೆಗೆ ಇಂತಿಷ್ಟು ಮನೆಗಳನ್ನು ಮುಗಿಸುವ ಗುರಿ ನೀಡಲಾಗಿದೆ. ಮನೆಗಳಿಗೆ ಭೇಟಿ ನೀಡಿದ ವೇಳೆ ಲಭ್ಯವಿರುವ ಕುಟುಂಬದವರಿಗೆ ಸ್ಥಳದಲ್ಲೇ ಮಧುಮೇಹ ಪರೀಕ್ಷೆ ಮತ್ತು ರಕ್ತದೊತ್ತಡ ಪರೀಕ್ಷೆ ಮಾತ್ರ ಪುಸ್ತಕದಲ್ಲಿ ದಾಖಲಿಸುತ್ತಾರೆ. ಅವರ ಆರೋಗ್ಯದ ಮಾಹಿತಿ ಪಡೆದು ಅನುಮಾನ ಬಂದರೆ ವೈದ್ಯರ ಗಮನಕ್ಕೆ ತರುವ ಕೆಲಸ ನಡೆಯುತ್ತಿದೆ. ಇದಾದ ನಂತರವಷ್ಟೇ ಮುಂದಿನ ತಪಾಸಣೆಗಳು ನಡೆಯಲಿವೆ. ಆಶಾ ಕಾರ್ಯಕರ್ತೆಯರೇ ಪ್ರಾಥಮಿಕ ಮಾಹಿತಿದಾರರಾದರೆ, ಗಂಭೀರ ಸಮಸ್ಯೆಗಳು ಕಂಡು ಬಂದರೆ ಹೆಚ್ಚಿನ ಚಿಕಿತ್ಸೆಗೆ ಮುಂದಿನ ಹಂತಗಳ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವುದು ಕಷ್ಟವಾಗಿದೆ.
ಡಿಜಿಟಲ್‌ನಲ್ಲಿ ದಾಖಲಾಗುತ್ತಿಲ್ಲ:
ತಪಾಸಣೆಗಳ ದಾಖಲಾತಿಗಾಗಿ ಆರೋಗ್ಯ ಸಿಬ್ಬಂದಿ ಮೊಬೈಲ್ ಅಪ್ಲಿಕೇಶನ್ ಬಳಸಿ ರೋಗಿಯ ಆರೋಗ್ಯ ಇತಿಹಾಸವನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಬೇಕು. ಆದರೆ, ಆಶಾಗಳ ಬಳಿ ಅತ್ಯಾಧುನಿಕ ಮೊಬೈಲ್‌ಗಳೇ ಇಲ್ಲ. ಪುಸ್ತಕದಲ್ಲಿ ಬರೆದುಕೊಂಡು ವಾರಕ್ಕೊಂದು ಬಾರಿ ಆರೋಗ್ಯ ಸಿಬ್ಬಂದಿಗೆ ಕೊಟ್ಟು ದಾಖಲು ಮಾಡಿಸುವ ಕೆಲಸ ನಡೆಯುತ್ತಿದೆ. ಆದರೆ, ಇದು ಎಷ್ಟು ಪಕ್ಕಾ ಎಂದು ಹೇಳುವುದು ಕಷ್ಟ. ಇದನ್ನೇ ಮುಂದಿನ ಆರೋಗ್ಯ ರಕ್ಷಣೆಗೆ ದಾಖಲೆಯಗಿ ಬಳಸುವುದು ಅದೆಷ್ಟು ಸೂಕ್ತ ಎಂಬ ಪ್ರಶ್ನೆ ಮೂಡಿದೆ.
ರಾಜ್ಯದ 20,44,204 ಮನೆಗಳಿಗೆ ಭೇಟಿ
ರಾಜ್ಯದ ಗ್ರಾಮೀಣ ಭಾಗದಲ್ಲಿ 1,67,70,495 ಜನರು 30 ವರ್ಷ ಮೇಲ್ಪಿಟ್ಟಿದ್ದಾರೆ. 20,44,204 ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಲಾಗಿದೆ. 46,97,218 ಜನರಿಗೆ ಆರೋಗ್ಯ ಜಾಗೃತಿ ಮೂಡಿಸಿ, ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ರಾಜ್ಯಾದ್ಯಂತ 36,743 ಆಶಾ ಕಾರ್ಯಕರ್ತೆಯರು ಯೋಜನೆ ಅನುಷ್ಠಾನದಲ್ಲಿ ತೊಡಗಿದ್ದಾರೆ.
ಬಿಪಿ, ಶುಗರ್ ಹೆಚ್ಚು ತಪಾಸಣೆ: ಧಾರವಾಡ ಜಿಲ್ಲೆಯಲ್ಲಿ 3,63,388 ಜನರು 30 ವರ್ಷ ಮೇಲ್ಪಟ್ಟಿದ್ದಾರೆ. ಜುಲೈ 21ರಿಂದ ಈವರೆಗೆ 1,53,779 ಜನರ ತಪಾಸಣೆ ಮಾಡಿದ್ದೇವೆಂದು ಅಽಕಾರಿಗಳು ಹೇಳುತ್ತಾರೆ. ಇದರಲ್ಲಿ 1,23,407 ಸಕ್ಕರೆ ಕಾಯಿಲೆ ತಪಾಸಣೆ ಮಾಡಲಾಗಿದೆ. ಈ ಪೈಕಿ 2,530 ಜನರಿಗೆ ಚಿಕಿತ್ಸೆಗೆ ಸಲಹೆ ನೀಡಲಾಗಿದೆ. 1,24,035 ಜನರಿಗೆ ಅತಿಯಾದ ರಕ್ತದೊತ್ತಡ ತಪಾಸಣೆ ಮಾಡಲಾಗಿದೆ. ಈ ಪೈಕಿ 3,705 ಜನರಿಗೆ ಚಿಕಿತ್ಸೆಗೆ ಸಲಹೆ ನೀಡಲಾಗಿದೆ. ಇವೆರಡು ರೋಗಗಳ ಬಗ್ಗೆ ಹೆಚ್ಚಾಗಿ ತಪಾಸಣೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು ತಪಾಸಣೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಗೃಹ ಆರೋಗ್ಯ ಯೋಜನೆಯಡಿ ತಪಾಸಣೆ ಕಾರ್ಯ ನಡೆಯುತ್ತಿದೆ. ಮನೆ ಮನೆಗೆ ತೆರಳಿ ವಿವಿಧ ಕಾಯಿಲೆಗಳ ಪತ್ತೆಗೆ ತಪಾಸಣೆಗಳು ಆಗುತ್ತಿವೆ. ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆ ಹೆಚ್ಚು ಕಂಡುಬoದಿವೆ.
ಆರಂಭದಲ್ಲಿ ವೈದ್ಯರು, ನರ್ಸ್ಗಳು ಹಾಗೂ ಆಶಾ ಕಾರ್ಯಕರ್ತರು ಸೇರಿ ಮನೆಗಳಿಗೆ ಹೋಗಿ ತಪಾಸಣೆ ಮಾಡಬೇಕು ಎಂದು ಹೇಳಿದ್ದರು. ಆದರೆ, ಕೆಲವು ದಿನಗಳ ನಂತರ ಬೇರೆ ಕೆಲಸಗಳ ನೆಪ ಹೇಳಿ ವೈದ್ಯರು ಮತ್ತು ನರ್ಸ್ಗಳು ಬರುತ್ತಿಲ್ಲ. ಮೊದಲು ನಮಗೆ ತಪಾಸಣೆ ಮಾಡಲು ಹೇಳಿದ್ದಾರೆ. ಜನರು ಕೊಡುವ ಆರೋಗ್ಯ ಮಾಹಿತಿ ಆಧರಿಸಿ ಏನಾದರೂ ಅನುಮಾನವಿದ್ದರೆ ನಾವು ವೈದ್ಯರಿಗೆ ತಿಳಿಸುತ್ತಿದ್ದೇವೆ.