noc ಹುಬ್ಬಳ್ಳಿ ವಿಶ್ವೇಶ್ವರ ನಗರದಲ್ಲಿರುವ ಭಾರತೀಯ ಸೇನೆಯ ಜಾಗದ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.
- ಈ ಜಾಗವನ್ನು ರೈಫಲ್ ರೇಂಜ್ ಉದ್ದೇಶಕ್ಕೆ ಸೇನೆ ಕಾಯ್ದಿರಿಸಿತ್ತು.
- ರಕ್ಷಣಾ ಸಚಿವರೊಂದಿಗೆ ಶೀಘ್ರ ಚರ್ಚೆ ನಡೆಸುವ ಭರವಸೆ.
- ಇನ್ನಿತರ ಸದುದ್ದೇಶಕ್ಕೆ ಬಳಕೆ ಮಾಡಬಹುದು.
ಭಾನುವಾರದಂದು ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿದ ಅವರು, ಸೇನಾ ಒಡೆತನದ ಜಾಗದ ಬದಲಾಗಿ ಬೇರೆಡೆ ಪರ್ಯಾಯ ಜಾಗ ನೀಡಲು ಈಗಾಗಲೇ ಧಾರವಾಡ ಜಿಲ್ಲಾಡಳಿತ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ.
ಈ ಜಾಗವನ್ನು ರೈಫಲ್ ರೇಂಜ್ ಉದ್ದೇಶಕ್ಕೆ ಸೇನೆ ಕಾಯ್ದಿರಿಸಿತ್ತು. ಇದೀಗ, ಸುತ್ತಲೂ ಜನವಸತಿ ಇರುವುದರಿಂದ ಈ ಜಾಗವನ್ನು ಸಾರ್ವಜನಿಕ ಬಳಕೆಗೆ ನೀಡಬೇಕು. ಸಾರ್ವಜನಿಕ ಬಳಕೆಗೆ ನೀಡಿದಲ್ಲಿ ಸೇನೆಯ ವಸ್ತು ಸಂಗ್ರಹಾಲಯ ನಿರ್ವಿುಸಬಹುದು. ಯುವಕ-ಯುವತಿಯರಿಗೆ ಕೌಶಲ ತರಬೇತಿ ಕೇಂದ್ರವನ್ನಾಗಿ ಇಲ್ಲವೇ ಒಳಾಂಗಣ ಕ್ರೀಡಾಂಗಣವನ್ನಾಗಿಯೂ ಬಳಸಬಹುದು ಅಥವಾ ಇನ್ನಿತರ ಸದುದ್ದೇಶಕ್ಕೆ ಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ.
ಸೇನಾ ಜಾಗೆಯಿಂದಾಗಿ ಸಿಮೆಂಟ್ ರಸ್ತೆ ನಿರ್ಮಾಣ,, ಒಳಚರಂಡಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸುತ್ತಲಿನ ಬಡಾವಣೆಗಳಿಗೆ ಒದಗಿಸುವುದು ಕಷ್ಟವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಮನವಿ ಸ್ವೀಕರಿಸಿದ ಸಚಿವ ಪ್ರಲ್ಹಾದ ಜೋಶಿ, ಈ ಕುರಿತು ರಕ್ಷಣಾ ಸಚಿವರೊಂದಿಗೆ ಶೀಘ್ರ ಚರ್ಚೆ ನಡೆಸುವ ಭರವಸೆ ನೀಡಿದರು.