ಮಕ್ಕಳ ಹಾಜರಾತಿಗೆ ವಿಶೇಷ ಒತ್ತು
ಧಾರವಾಡ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮುಖಚರ್ಯೆ ಆಧಾರಿತ ಹಾಜರಾತಿಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿನೂತನವಾಗಿ `ನಿರಂತರ' ಆ್ಯಪ್ ಜಾರಿಗೆ ತಂದಿದ್ದು, ಮಕ್ಕಳ ಹಾಜರಾತಿಗೆ ವಿಶೇಷ ಒತ್ತು ನೀಡಿದೆ.
ಪ್ರಸಕ್ತ ಸಾಲಿನಿಂದಲೇ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ `ನಿರಂತರ' ಆ್ಯಪ್ ಮೂಲಕ ಹಾಜರಾತಿ ಪಡೆಯಬೇಕು ಎಂದು ಇಲಾಖೆ ಸೂಚಿಸಿದೆ. ಇಲಾಖೆಯು ಇದೇ ವರ್ಷ ಶಿಕ್ಷಕರಿಗೆ ಮಾತ್ರವಲ್ಲದೇ ವಿದ್ಯಾರ್ಥಿಗಳ ಹಾಜರಾತಿಗೂ ನೂತನ ತಂತ್ರಜ್ಞಾನ ಆಧರಿತ ಹಾಜರಾತಿಯ ಮೊರೆ ಹೋಗಿದೆ.
ಶಿಕ್ಷಣ ಇಲಾಖೆಯಿಂದ ಅನುಷ್ಠಾನಗೊಳಿಸಿರುವ `ನಿರಂತರ ಆ್ಯಪ್' ಅನ್ನು ಸರ್ಕಾರಿ ಶಾಲೆಯ ಶಿಕ್ಷಕರಿಗೆ ಒದಗಿಸಲಾಗಿದೆ. ಆಯಾ ತರಗತಿಯ ಶಿಕ್ಷಕರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮೊದಲು ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಆಯಾ ತರಗತಿಯ ಪ್ರತಿಯೊಂದು ವಿದ್ಯಾರ್ಥಿಗಳ ಮುಖವನ್ನು ಎಡ, ಬಲ ಮತ್ತು ಎದುರಿನಿಂದ ಮೂರು ವಿಧವಾಗಿ ಆ್ಯಪ್‌ನಲ್ಲಿ ಸೆರೆಹಿಡಿದು ನೋಂದಣಿ ಮಾಡಿಕೊಳ್ಳಬೇಕು. ಇದಾದ ನಂತರ, ನಿತ್ಯ ಹಾಜರಾತಿಗಾಗಿ ಶಿಕ್ಷಕರು ತರಗತಿ ಕೊಠಡಿಯಲ್ಲಿ ಕುಳಿತುಕೊಳ್ಳುವ ಎಲ್ಲ ಮಕ್ಕಳನ್ನು ಒಂದೇ ಬಾರಿ ಆ್ಯಪ್‌ನಲ್ಲಿ ಸೆರೆ ಹಿಡಿದರೆ, ಎಐ ತಂತ್ರಜ್ಞಾನವು ಆಯಾ ಮಕ್ಕಳ ಮುಖ ಗುರುತಿಸಿ, ಹಾಜರಾತಿ ಹಾಕುತ್ತದೆ. ಈ ಹಾಜರಾತಿಯು ಇಲಾಖೆಯ ತಂತ್ರಾಂಶ ಕ್ಕೂ ಹೋಗುತ್ತದೆ.
ಜಿಲ್ಲೆಯಲ್ಲಿ ಶೇ. 50ರಷ್ಟು ನೋಂದಣಿ:
ಜಿಲ್ಲೆಯಲ್ಲಿ `ನಿರಂತರ' ಆ್ಯಪ್‌ಗೆ ಮಕ್ಕಳ ನೋಂದಣಿ ಶೇ. 50ರಷ್ಟಾಗಿದೆ. ಪ್ರಸಕ್ತ ಸಾಲಿನ ಮಕ್ಕಳ ಪ್ರವೇಶಾತಿ ಪ್ರಕ್ರಿಯೆ ನಡುವೆಯೂ ಆ್ಯಪ್ ಆಧಾರಿತ ಮುಖಚರ್ಯೆದ ಹಾಜರಾತಿ ಪಡೆಯಲು ನೋಂದಣಿ ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದೆ. ಆ್ಯಪ್ ಮೂಲಕ ವಿದ್ಯಾರ್ಥಿಗಳ ಹಾಜರಾತಿ ಹಾಕುವ ಕುರಿತಂತೆ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಸಿಆರ್‌ಪಿಗಳಿಗೆ, ಸಿಆರ್‌ಪಿಗಳ ಮೂಲಕ ಶಾಲಾ ಮುಖ್ಯ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು, ಶಾಲಾ ಶಿಕ್ಷಕರಿಗೆ ಈ ಬಗ್ಗೆ ತರಬೇತಿ ನೀಡುತ್ತಿದ್ದಾರೆ. `ನಿರಂತರ' ಆ್ಯಪ್ ಆಧಾರಿತ ಹಾಜರಾತಿ ಶುರುವಾದ ಬಳಿಕ ಹಳೆಯ ಕಾಲದ ಪುಸ್ತಕ ಹಾಜರಾತಿ ಇತಿಶ್ರೀ ಬೀಳಲಿದೆ.