ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ (Newborn baby) ಚಿಕಿತ್ಸೆ ನೀಡಲಾಯಿತು.
ಕಲಘಟಗಿ: ನವಜಾತ ಶಿಶುವೊಂದನ್ನು (Newborn baby) ಕಸದ ರಾಶಿಯಲ್ಲಿ ಎಸೆದು ಹೋದ ಮನ ಕಲಕುವ ಘಟನೆಯೊಂದು ತಾಲೂಕಿನ ಹುಲಗಿನಕಟ್ಟಿ ತಾಂಡಾದ ಸರಹದ್ದಿನಲ್ಲಿ ಶುಕ್ರವಾರ ನಡೆದಿದೆ.
ಅದೀಗ ತಾನೇ ಜನ್ಮ ತಾಳಿ ತಾಯಿಯ ಮಡಿಲಲ್ಲಿ ಇರಬೇಕಾಗಿದ್ದ ನವಜಾತ ಗಂಡು ಶಿಶುವನ್ನು ಕಪ್ಪು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಹುಲಗಿನಕಟ್ಟಿ ತಾಂಡಾದ ಸನಿಹದ ಕಸದ ರಾಶಿಯಲ್ಲಿ ಯಾರೋ ಎಸೆದು ಹೋಗಿದ್ದಾರೆ.
ತಾಂಡಾದ ನಿವಾಸಿಗಳು ವಾಯುವಿಹಾರಕ್ಕೆಂದು ತೆರಳಿದಾಗ ಕಸದ ರಾಶಿಯಿಂದ ಮಗು ಅಳುವ ಶಬ್ದ ಕೇಳಿದೆ. ಮಗು ಅಳುವ ಶಬ್ದ ಆಲಿಸಿ ಭಯಗೊಂಡ ಮಹಿಳೆಯೊಬ್ಬರು ಕೂಡಲೇ ಹಿರಿಯರಿಗೆ ತಿಳಿಸಿದ್ದಾರೆ. ಅಲ್ಲದೆ, ಶಬ್ದ ಬರುತ್ತಿದ್ದ ಕಸದ ರಾಶಿಯಲ್ಲಿನ ಪ್ಲಾಸ್ಟಿಕ್ ಚೀಲ ತೆಗೆದು ನೋಡಿದಾಗ ಅದರಲ್ಲಿ ನವಜಾತ ಶಿಶು ಪತ್ತೆಯಾಗಿದೆ. ನಂತರ ಮಹಿಳೆ ಕುಡಗೋಲು ಸಹಾಯದಿಂದ ಕರುಳು ಬಳ್ಳಿ ಕತ್ತರಿಸಿ, ಶಿಶುವನ್ನು ಮನೆಗೊಯ್ದು ಸ್ನಾನ ಮಾಡಿಸಿ, ಬಟ್ಟೆ ತೊಡಿಸಿ ಸ್ಥಳೀಯ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಕಲಘಟಗಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.
ಮಗುವಿಗಾಗಿ ಬಂಜಾರ ಸಮುದಾಯ ಪಟ್ಟು: ನಮ್ಮ ತಾಂಡಾ ಸರಹದ್ದಿನಲ್ಲಿ ಪತ್ತೆಯಾಗಿರುವ ಶಿಶುವನ್ನು ನಮಗೆ ನೀಡಬೇಕು. ಶಿಶುವನ್ನು ಬೆಳೆಸಿ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುತ್ತೇವೆ ಎಂದು ಕೆಲಕಾಲ ಗ್ರಾಮಸ್ಥರು ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಪಟ್ಟು ಹಿಡಿದರು. ಆಗ ವೈದ್ಯರು, ಈ ರೀತಿ ಮಗು ನೀಡುವುದು ಕಾನೂನುಬಾಹಿರವಾಗಿದೆ. ಮೇಲಧಿಕಾರಿಗಳ ಮಾಹಿತಿ ಹಾಗೂ ನಿಯಮ ಅನುಸರಿಸದೆ ಮಗು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಜಿಲ್ಲಾ ಶಿಶುಪಾಲನಾ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ.