neharu ground ಸ್ವಾತಂತ್ರೃ ದಿನ ನಿಮಿತ್ತ ಹುಬ್ಬಳ್ಳಿಯಲ್ಲಿ ಶಹರ ತಹಸೀಲ್ದಾರ್ ಮಹೇಶ ಭಗವಂತ ಗಸ್ತೆ ಅವರು ವಿವಿಧ ಪಡೆಗಳಿಂದ ಶನಿವಾರ ಗೌರವ ವಂದನೆ ಸ್ವೀಕರಿಸಿದರು.
ಹುಬ್ಬಳ್ಳಿ: ನಾವು ಸ್ವಾತಂತ್ರೃ ರಾಷ್ಟ್ರದಲ್ಲಿ ಬದುಕುತ್ತಿರುವುದಕ್ಕೆ ನಮ್ಮ
ಹೋರಾಟಗಾರರ ತ್ಯಾಗ, ಪರಿಶ್ರಮದ ಫಲ. ಇದನ್ನು ನಾವು ಹಬ್ಬವಾಗಿ ಆಚರಿಸುವುದಷ್ಟೇ ಅಲ್ಲ, ದೇಶದ ಅಭಿವೃದ್ಧಿಗೂ ಶ್ರಮಿಸುವಂತಾಗಬೇಕು ಎಂದು ಹುಬ್ಬಳ್ಳಿ ಶಹರ ತಹಸೀಲ್ದಾರ್ ಮಹೇಶ ಭಗವಂತ ಗಸ್ತೆ ಅಭಿಪ್ರಾಯಪಟ್ಟರು.
ಇಲ್ಲಿಯ ನೆಹರು ಕ್ರೀಡಾಂಗಣದಲ್ಲಿ ಹುಬ್ಬಳ್ಳಿ ನಗರ ತಾಲೂಕು ಸ್ವಾತಂತ್ರ್ಯೋತ್ಸವ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ 80ನೇ ಸ್ವಾತಂತ್ರೃ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ ನಿರ್ಮೂಲನೆ, ಶಿಕ್ಷಣಕ್ಕೆ ಮಹತ್ವ ಕೊಡುವುದು, ಪರಿಸರ ಸಂರಕ್ಷಣೆ ಹಾಗೂ ಎಲ್ಲರ ಹಕ್ಕುಗಳನ್ನು ಕಾಪಾಡಬೇಕು. ಜತೆಗೆ ಸಮ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸ್ವಾತಂತ್ರೃ ದಿನವನ್ನು ಹಬ್ಬದ ಮಾದರಿಯಲ್ಲಿ ದೇಶಾದ್ಯಂತ ಜಾರಿಗೆ ತಂದವರು ಪ್ರಧಾನಿ ನರೇಂದ್ರ ಮೋದಿ. ಹರ್ ಘರ್ ತಿರಂಗಾ ಮೂಲಕ ಪ್ರತಿ ಮನೆ ಮನೆಗಳ ಮೇಲೆ ಧ್ವಜ ಹಾರಿಸುವಂತೆ ಮಾಡಿದರು. 2047ರ ವಿಕಸಿತ ಭಾರತಕ್ಕೆ ಯುವಶಕ್ತಿ ಎಂಬ ಸಂಕಲ್ಪ ಮಾಡಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಡತನ ರೇಖೆಗಿಂತ ಕೆಳಗಿನವರನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ. ಯುದ್ಧದಿಂದಾಗಿ ಬೇರೆ ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೂ ನಮ್ಮ ದೇಶವು ಆರ್ಥಿಕ ಸದೃಢವಾಗಿರುವಂತೆ ನೋಡಿಕೊಂಡಿದ್ದಾರೆ. ರಫ್ತು ಪ್ರಮಾಣವನ್ನು ಹೆಚ್ಚಿಸಿದ್ದಾರೆ. ಇದಕ್ಕೆಲ್ಲ ಕಾರಣ ಅವರ ಸಮರ್ಥ ನಾಯಕತ್ವ ಎಂದು ಪ್ರಧಾನಿಯವರನ್ನು ಬಣ್ಣಿಸಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಾಧನೆಗೈದ ವಿದ್ಯಾರ್ಥಿಗಳಾದ ಸಿಮ್ರಾನ್ ನದಾಫ್, ಅರ್ಜುನ ಗಾಳಿ ಅವರನ್ನು ಗೌರವಿಸಲಾಯಿತು. ಪರೇಡ್ ಕಮಾಂಡರ್ ಆರ್‌ಎಸ್‌ಐ ಜಗದೀಶ ದಳವಾಯಿ ಮುಂದಾಳತ್ವದಲ್ಲಿ ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ, ವಿವಿಧ ಶಾಲೆಗಳ ಎನ್‌ಸಿಸಿ, ಸ್ಕೌಟ್ ಆ್ಯಂಡ್ ಗೈಡ್ಸ್ ಸೇರಿದಂತೆ ಒಟ್ಟು 21 ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆದವು.
ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಎಂಎಲ್‌ಸಿ ಪ್ರದೀಪ ಶೆಟ್ಟರ್, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಗ್ರೇಡ್ 2 ತಹಸೀಲ್ದಾರ್ ಶಿವಾನಂದ ಹೆಬ್ಬಳ್ಳಿ, ಶಹರ ಬಿಇಒ ಎಚ್.ಎಂ. ಫಡ್ನೇಶಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.