negotiation ಗುರುಸಿದ್ದಪ್ಪ ಕೋತಂಬ್ರಿ ಕಾನೂನು ಮಹಾವಿದ್ಯಾಲಯ. 
ಧಾರವಾಡ

negotiation ಜಿಕೆ ಲಾ ಕಾಲೇಜಿನಲ್ಲಿ ಸಂಧಾನ ಸ್ಪರ್ಧೆ

ಪ್ರಮುಖ ಮುಖ್ಯಾಂಶಗಳು

  • ಕಲಿಕೆಯೊಂದಿಗೆ ಕೌಶಲ ಬೆಳೆಸುವ ಉದ್ದೇಶ
  • ಪ್ರಾಚಾರ್ಯ ಡಾ. ಜ್ಞಾನೇಶ್ವರ ಚೌರಿ ಅಭಿಮತ
ಹುಬ್ಬಳ್ಳಿ: negotiation ಕಾನೂನು ವಿದ್ಯಾರ್ಥಿಗಳಲ್ಲಿ ಕಲಿಕೆ ಜತೆಗೆ ವೃತ್ತಿ ಕೌಶಲ ಬೆಳೆಸುವ ಉದ್ದೇಶದಿಂದ ಇಲ್ಲಿಯ ವಿದ್ಯಾನಗರದ ಕೆಎಲ್​ಇ ಸಂಸ್ಥೆಯ ಗುರುಸಿದ್ದಪ್ಪ ಕೋತಂಬ್ರಿ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರ ಮಟ್ಟದ 4ನೇ ಸಂಧಾನ ಸ್ಪರ್ಧೆಯನ್ನು (ನೆಗೋಷಿಯೇಶನ್​) ಏ. 24ರಿಂದ ಎರಡು ದಿನಗಳವರೆಗೆ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ. ಜ್ಞಾನೇಶ್ವರ ಚೌರಿ ತಿಳಿಸಿದರು.
ನಗರದ ಕಾಲೇಜಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈ, ಬೆಂಗಳೂರು, ಬೆಳಗಾವಿ, ಉಡುಪಿ, ವಿಜಯಪುರ, ಕಲಬುರ್ಗಿ ಸೇರಿ ವಿವಿಧ ಕಡೆಗಳಿಂದ 22 ಕಾಲೇಜಿನ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಪ್ರತಿ ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಇರುತ್ತಾರೆ. 50ಕ್ಕೂ ಹೆಚ್ಚು ವಕೀಲರು, ತಜ್ಞರು ನಿರ್ಣಾಯಕರಾಗಿ ಪಾಲ್ಗೊಳ್ಳುವರು ಎಂದರು.
ಸಂಸ್ಥೆಯ ಐದು ಕಾನೂನು ಕಾಲೇಜುಗಳು ಸೇರಿ ಎರಡು ದಶಕದ ಹಿಂದೆ ಕೆಎಲ್​ಇ ಲಾ ಅಕಾಡೆಮಿ ಸ್ಥಾಪಿಸಲಾಗಿದ್ದು, ಅದರ ಅಡಿಯಲ್ಲಿ ಪ್ರತಿ ವರ್ಷ ರಾಷ್ಟ್ರ ಮಟ್ಟದ ಸಮ್ಮೇಳನಗಳು, ಮೂಟ್​ ಕೋರ್ಟ್​, ಕ್ಲೆಂಟ್​ ಇಂಟರ್​ವ್ಯೂವ್​ ಮತ್ತು ಸಂಧಾನ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಪ್ರಸ್ತುತ ದೇಶಿಯ ಮತ್ತು ಜಾಗತಿಕ ಮಟ್ಟದಲ್ಲಿ ಪರ್ಯಾಯ ವಿವಾದ ಪರಿಹಾರ ಪದ್ಧತಿಗಳಿಗೆ ಬಹು ಬೇಡಿಕೆ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಕೌಶಲ ಬೆಳೆಸಲು ಇದನ್ನು ಆಯೋಜಿಸಲಾಗಿದೆ. ಧಾರವಾಡದ ಪಾರಂಪರಿಕ ಪೇಡೆ ವಿಷಯವನ್ನು ಸ್ಪರ್ಧೆಗೆ ಆಯ್ದುಕೊಳ್ಳಲಾಗಿದೆ ಎಂದರು.

ಒತ್ತಡ ತಗ್ಗಿಸುವುದು

ಸ್ಪರ್ಧೆ ಸಂಯೋಜಕಿ ಡಾ. ಶಾರದಾ ಜಿ. ಪಾಟೀಲ ಮಾತನಾಡಿ, ನ್ಯಾಯಾಲಯಗಳ ಮೇಲೆ ಒತ್ತಡ ಕಡಿಮೆ ಮಾಡಲು ಹಾಗೂ ತ್ವರಿತ ಮತ್ತು ನ್ಯಾಯಸಮ್ಮತವಾಗಿ ವಿವಾದ ಬಗೆ ಹರಿಸಲು ಸಂಧಾನ ಪ್ರಕ್ರಿಯೆ ನಡೆಸಲಾಗುತ್ತದೆ. ಇದಕ್ಕೆ ತರಬೇತಿ ಅಗತ್ಯವಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಈಗಿನಿಂದಲೇ ಕೌಶಲ ಕಲಿಸಲು ಶೈಕ್ಷಣಿಕ ಚಟುವಟಿಕೆ ಜತೆಗೆ ಸ್ಪರ್ಧೆ ನೆರವಾಗಲಿದೆ ಎಂದರು.
ಸಂಯೋಜಕ ಜೈ ಹನುಮಾನ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ನ್ಯಾಯದಾನ ತ್ವರಿತವಾಗಬೇಕು ಎಂಬುದು ಎಲ್ಲರ ಬೇಡಿಕೆ. ನ್ಯಾಯ ಬಯಸುವ ಇಬ್ಬರಿಗೂ ಅನುಕೂಲಕರವಾದ ಸಂಧಾನವು ಸಮರ್ಪಕವಾಗಿ ಆಗಬೇಕು. ಇದಕ್ಕೆ ತರಬೇತಿ ಪಡೆದ ಸಂಧಾನಕಾರರು ಬೇಕು. ಅಂತಹ ತರಬೇತಿ ನೀಡುವುದರೊಂದಿಗೆ ಸ್ಪರ್ಧೆಗಳನ್ನು ಕಾಲೇಜು ಆಯೋಜಿಸುತ್ತ ಬಂದಿದೆ ಎಂದರು.
ವಿಜೇತರಿಗೆ 15 ಸಾವಿರ ರೂ. ಪ್ರಥಮ, ರನ್ನರ್​ ಅಪ್​ಗೆ 10 ಸಾವಿರ ರೂ. ಬಹುಮಾನ ಜತೆಗೆ ಬೆಸ್ಟ್​ ಸಂಧಾನಕಾರ, ಫೆಸಿಲಿಟೇಟರ್​ ಹೀಗೆ ವಿವಿಧ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.