jain ಜೈನ ಅಭಿವೃದ್ಧಿ ನಿಗಮ ಮಂಡಳಿ ರಚನೆಗೆ ಆಗ್ರಹಿಸಿ ರಾಷ್ಟ್ರಸಂತ ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಸಚಿವ ಯು.ಟಿ. ಖಾದರ ಅವರಿಗೆ ಮನವಿ ಸಲ್ಲಿಸಿದರು.
- ವರೂರು ನವಗ್ರಹ ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ ಭರವಸೆ
- ನಿಗಮ, ಮಂಡಳಿ ರಚನೆಗೆ ಕೇವಲ 20 ದಿನಗಳ ಗಡವು
- ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿಸುವುದರಲ್ಲಿ ನಿಜವಾದ ದೇಶಭಕ್ತಿ ಅಡಗಿದೆ.
ವರೂರಿನ ಎಜಿಎಂ ಜೈನಮಠ ಟ್ರಸ್ಟ್ನ ಎಜಿಎಂ ಗ್ರುಪ್ ಆಫ್ ಇನ್ಸ್ಟಿಟ್ಯೂಶನ್ಸ್ನಿಂದ ಶನಿವಾರ ಆಯೋಜಿಸಿದ್ದ ಪ್ರತಿಭಾವಂತ ಹಾಗೂ ಬುದ್ಧವಿಂತ ವಿದ್ಯಾರ್ಥಿಗಳ ವಿಶೇಷ ಸನ್ಮಾನ ಸಮಾರಂಭ, ಜೈನ ಸಮಾಜದ ಕರುಣಾಧಾರ ಹಾಗೂ ಸಮಾಜಸೇವಕರ ವಿಶೇಷ ಸನ್ಮಾನ, ಮಕ್ಕಳಿಂದ ಪ್ರೇರಣಾದಾಯಕ ಹಿಮಾಲಯ ಯಾತ್ರೆಯ ಶುಭಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ನಿಗಮ, ಮಂಡಳಿ ರಚನೆಗೆ ಕೇವಲ 20 ದಿನಗಳ ಗಡವು ನೀಡಿದ್ದಾರೆ. ಸಚಿವ ಸ್ಥಾನ ವಹಿಸಿಕೊಂಡು ಕೆಲವೇ ದಿನಗಳಾಗಿವೆ. ಹೀಗಾಗಿ, ಹೆಚ್ಚಿನ ಗಡವು ನೀಡಬೇಕು. ಮುಖ್ಯಮಂತ್ರಿ ಅವರಿಗು ಸಹ ಜೈನ ಸಮಾಜದ ಬಗ್ಗೆ ಸಾಕಷ್ಟು ಕಾಳಜಿ ಇದೆ ಎಂದರು.
ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿಸುವುದರಲ್ಲಿ ನಿಜವಾದ ದೇಶಭಕ್ತಿ ಅಡಗಿದೆ. ಬಲಿಷ್ಠ ರಾಷ್ಟ್ರಕ್ಕೆ ಶಿಕ್ಷಣ ಹಾಗೂ ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿಸುವುದು ಅಗತ್ಯ.
ಶಾಸಕರಿಂದಾಗಲಿ, ಸಂಸದರಿಂದಾಗಲಿ, ವ್ಯಾಪಾರಸ್ಥರಿಂದಾಗಲಿ ದೇಶ ಬಲಿಷ್ಠ ಆಗುವುದಿಲ್ಲ. ಸುಶಿಕ್ಷಿತರಿಂದ ಮಾತ್ರ ದೇಶ ಪ್ರಬಲವಾಗಲು ಸಾಧ್ಯ. ಭಾರತ ವಿಶ್ವದ ನಂ. 1 ಆಗಬೇಕೆಂದರೆ ಸುಶಿಕ್ಷಿತ ವಿದ್ಯಾರ್ಥಿಗಳ ಅವಶ್ಯಕತೆ ಇದೆ ಎಂದರು.
ಹಾಗೆ ನೋಡಿದರೆ ಭ್ರಷ್ಟಾಚಾರಿಗಳು, ಭಯೋತ್ಪಾದಕರು ಹೆಚ್ಚು ಶಿಕ್ಷಣ ಕಲಿತವರೇ ಆಗಿರುತ್ತಾರೆ. ಶಿಕ್ಷಣವೊಂದರಿಂದ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯ ಇಲ್ಲ.
ಶಿಕ್ಷಣದ ಜತೆಗೆ ಉತ್ತಮ ವ್ಯಕ್ತಿತ್ವ, ತಾಳ್ಮೆ, ಪರಿಶ್ರಮವನ್ನೂ ಮೈಗೂಡಿಸಿಕೊಳ್ಳಬೇಕು. ವರೂರು ನವಗ್ರಹ ತೀರ್ಥ ಕ್ಷೇತ್ರದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಕಂಡುಬಂದಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಭವಿಷ್ಯದ ಜೀವನದಲ್ಲಿ ಬುದ್ಧಿಶಕ್ತಿವೊಂದರಿಂದಲೇ ಕಾರ್ಯನಿರ್ವಹಿಸದೇ ಹೃದಯದಿಂದ ಕೆಲಸ ಮಾಡಿ. ಮಾನವೀಯತೆ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಮಾತನಾಡಿ, ಜೈನ ನಿಗಮ, ಮಂಡಳಿ ರಚನೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದಾಗಿಂದ ಮನವಿ ಕೊಡಲಾಗುತ್ತಿದ್ದರೂ ಇದುವರೆಗೆ ಬೇಡಿಕೆ ಈಡೇರಿಲ್ಲ. ಇನ್ನೂ 20 ದಿನಗಳಲ್ಲಿ ಬೇಡಿಕೆ ಈಡೇರದೇ ಇದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚೀನಾ ಹಾಗೂ ಹಿಮಾಲಯ ಶೈಕ್ಷಣಿಕ ಅಧ್ಯಯನ ಪ್ರವಾಸಕ್ಕೆ ಆಯ್ಕೆಯಾಗಿರುವ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿಮಾನದ ಟಿಕೆಟ್ ವಿತರಿಸಲಾಯಿತು.
ಹೆಚ್ಚು ಅಂಕ ಗಳಿಸಿದ ಬಿಎಎಂಎಸ್ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸಲಕರಣೆಗಳ ಕಿಟ್ ವಿತರಣೆ ಮಾಡಲಾಯಿತು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಶಾಸಕ ಪ್ರಸಾದ ಅಬ್ಬಯ್ಯ, ಮಹೇಂದ್ರ ಸಿಂಘಿ, ವಿದ್ಯಾಧರ ಪಾಟೀಲ ಇತರರಿದ್ದರು.