ಬಾಳೆಗಿಡದೊಂದಿಗೆ ಬಸವರಾಜ ಬೆಳವಟಗಿ
ಪ್ರಸ್ತುತ ದಿನಗಳಲ್ಲಿ ತಿನ್ನುವ ಪ್ರತಿ ಅಗಳು ಅನ್ನವೂ ವಿಷಯುಕ್ತವಾಗುತ್ತಿದೆ. ಅಧಿಕ ಇಳುವರಿ, ಆದಾಯ ಪಡೆಯಬೇಕು ಎಂಬ ಹಪಾಹಪಿಯೇ ಇದಕ್ಕೆ ಕಾರಣ. ಆದರೆ, ಇಲ್ಲೋಬ್ಬ ರೈತ ಆದಾಯ ಕಡಿಮೆಯಾದರೂ ಚಿಂತೆ ಇಲ್ಲ ನನ್ನ ಭೂಮಿ, ನಾನು ಬೆಳೆಯುವ ಬೆಳೆ ಶುದ್ಧವಾಗಿರಬೇಕು ಎಂಬ ಸಂಕಲ್ಪ ತೊಟ್ಟು ನೈಸರ್ಗಿಕ ಕೃಷಿ ಮಾಡುತ್ತ ಇತರರಿಗೂ ಮಾದರಿಯಾಗಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದ ಬಸವರಾಜ ನಿಂಗಪ್ಪ ಬೆಳವಟಗಿ ಈ ಆದರ್ಶ ಕೃಷಿಕ. ಬಸವರಾಜ ಬಿಕಾಂ ಪದವೀಧರ. ಚಿಕ್ಕಂದಿನಿಂದಲೇ ಕೃಷಿ ಕಡೆಗೆ ಹೆಚ್ಚು ಆಸಕ್ತಿ ಹೊಂದಿದ್ದರು. ಇದರಿಂದ ಬೇರೆ ಉದ್ಯೋಗದ ಕಡೆ ಗಮನ ಹರಿಸದೇ ತಮ್ಮ 12 ಎಕರೆ ಜಮೀನಿನಲ್ಲೆ ಕೃಷಿ ಮಾಡುತ್ತ ಬಂದಿದ್ದಾರೆ.
2018ರಲ್ಲಿ ಧಾರವಾಡ ಕೃಷಿ ವಿವಿಯಿಂದ ಆಯ್ಕೆಗೊಂಡು ಆಂಧ್ರಪ್ರದೇಶ ರಾಜ್ಯದ ಅಮರಾವತಿಯಲ್ಲಿ ಆಯೋಜನೆಗೊಂಡಿದ್ದ ನೈಸರ್ಗಿಕ ಕೃಷಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ನೈಸರ್ಗಿಕ ಕೃಷಿ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಬಂದು ‘ಉತ್ತಮ ನಾಳೆಗಳಿಗಾಗಿ ನೈಸರ್ಗಿಕ ಕೃಷಿ’ ಅವಶ್ಯಕ ಎಂದು ತಿಳಿದು ಅಂದಿನಿಂದ ಸಾಂಪ್ರದಾಯಿಕ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ.
ಸ್ವತಃ ಗೊಬ್ಬರ, ಕೀಟನಾಶಕ ತಯಾರಿಕೆ
ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆಯಿಂದ ಇಂದು ಭೂಮಿ ಲವತತ್ತೆ ಕಳೆದುಕೊಳ್ಳುತ್ತಿದೆ. ಇದರೊಟ್ಟಿಗೆ ಆಹಾರ ಕೂಡ ವಿಷಯುಕ್ತವಾಗುತ್ತಿದೆ. ಹೀಗಾಗಿಯೇ ಬಸವರಾಜ ತಾವೇ ಗೊಬ್ಬರ, ಕೀಟನಾಶಕ ತಯಾರಿಸಿ ಹೊಲಕ್ಕೆ ಹಾಕುತ್ತಿದ್ದಾರೆ. ನಿಮಾಸ (ರಸ ಹೀರುವ ಕೀಟನಾಶಕ ನಿಯಂತ್ರಣ), ಅಗ್ನಿಅಸ (ಕಾಯಿ, ಕಾಂಡ ಕೊರಕ ಹುಳು ನಿಯಂತ್ರಣ), ದಶಪರಣಿ (ಬೇವು, ಹೊಂಗೆ, ಸೀತಾಲ, ಮಾದಗುಣಕಿ, ಎಕ್ಕಿ, ಕರೆಲಕ್ಕಿ, ಲಕ್ಕಿ, ಲಾಂಟಾನ್, ಔಡಲ ಎಲೆಗಳಿಂದ ತಯಾರು ಮಾಡಿರುವ ಔಷಧ), ಗೋ ಕೃಪಾಮೃತ, ಜೀವಾಮೃತ, ವಿಶೇಷ ಗೊಬ್ಬರ (2 ಕೆಜಿ ಕಡಲೆ ಹಿಟ್ಟು, ದೇಸಿ ಆಕಳ ಸೆಗಣಿ, 2 ಕೆಜಿ ಸಾವಯವ ಬೆಲ್ಲ, 1 ಲೀಟರ್ ಗೋ ಮುತ್ರ, ಹೊಲದ ಹಿಡಿ ಮಣ್ಣು ಸೇರಿಸಿ ಮಾಡುತ್ತಾರೆ), ಸಹಜವಾಗಿ ಮೃತಪಟ್ಟ ಜಾನುವಾರುಗಳಿಂದ ‘ಗೋ ನಂದಾಜಲ’ ಎಂಬ ಕೀಟನಾಶಕ ತಯಾರಿಸುತ್ತಿದ್ದಾರೆ. ಈ ರೀತಿಯಾಗಿ ನೈಸರ್ಗಿಕ ಗೊಬ್ಬರ, ಕೀಟನಾಶಕ ತಯಾರಿಸಿ ಬೆಳೆಗಳಿಗೆ ಹಾಕುವ ಮೂಲಕ ಅಧಿಕ ಇಳುವರಿ ಪಡೆದು ವಾರ್ಷಿಕ ಅಂದಾಜು 6-7 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.
ಮಿಶ್ರ ಬೆಳೆ
12 ಎಕರೆಯಲ್ಲಿ ಈಗಾಗಲೇ ಚಿಕ್ಕು, ಪೇರಲೆ, ಸೀತಾಲ, ಬಾಳೆ, ಹುಣಸೆ, ಮಾವು, ನೇರಳೆ ಗಿಡ ಬೆಳೆಸಿದ್ದಾರೆ. ಇವುಗಳ ಜತೆಗೆ ಮೆಣಸಿನಕಾಯಿ, ಉಳ್ಳಾಗಡ್ಡಿ, ಎಳ್ಳು, ಜೋಳ, ಗೋದಿ, ಕುಸುಬೆ, ಕಡಲೆ, ಸಾಸಿವೆ, ಮಡಕಿ ಹಾಕಿದ್ದಾರೆ. ಸೌತೆಕಾಯಿ, ಮಡಕೆ ತೇವಾಂಶ ಕಾಯ್ದುಕೊಳ್ಳುತ್ತದೆ ಎಂಬ ಕಾರಣಕ್ಕೆ ಅಲ್ಲಲ್ಲಿ ಹಾಕಿದ್ದಾರೆ. ಇವುಗಳ ಬಳ್ಳಿ ಬೆಳೆಗೆ ಮಲ್ಜಿಂಗ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎನ್ನುತ್ತಾರೆ ಬಸವರಾಜ.
ಕೃಷಿಕರಿಗೆ ತರಬೇತಿ
ನೈಸರ್ಗಿಕ ಕೃಷಿ ಮುಂದಿನ ಪೀಳಿಗೆಗೂ ತಲುಪಬೇಕು ಎಂಬ ಉದ್ದೇಶದಿಂದ ಬಸವರಾಜ ನೈಸರ್ಗಿಕ ಕೃಷಿ ಪದ್ಧತಿ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿದ್ದಾರೆ. ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಹಾಗೂ ಕೃಷಿ ಇಲಾಖೆ ಇವರನ್ನು ವಿಶೇಷ ಉಪನ್ಯಾಸಕರನ್ನಾಗಿ ಆಹ್ವಾನಿಸಿ ಬೇರೆ ಬೇರೆ ರೈತರ ಹೊಲಗಳಲ್ಲಿ ಉಪನ್ಯಾಸ ಏರ್ಪಡಿಸಿ ನೈಸರ್ಗಿಕ ಕೃಷಿ ಬಗ್ಗೆ ಮಾಹಿತಿ ನೀಡುತ್ತಿದೆ. ಹೊಲಕ್ಕೆ ಆಸಕ್ತಿಯಿಂದ ಬಂದ ರೈತರಿಗೂ ಮಾಹಿತಿ ನೀಡುವ ಕಾರ್ಯ ಮಾಡುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಇವರ ಹೊಲದಲ್ಲೇ ನೈಸರ್ಗಿಕ ಕೃಷಿ ಉಪನ್ಯಾಸ ಏರ್ಪಡಿಸಲಾಗಿತ್ತು. ಆಗ ಯಡಿಯೂರಪ್ಪನವರೇ ಇವರ ಕೃಷಿಗೆ ಭೇಷ್ ಅಂದಿದ್ದರು. ಹಳ್ಯಾಳದಲ್ಲಿ ನೈಸರ್ಗಿಕ ಕೃಷಿ ಮಾಡುವವರು ಹೆಚ್ಚಾದ ಕಾರಣ ಹಳ್ಯಾಳ ಗ್ರಾಮವನ್ನು ‘ನೈಸರ್ಗಿಕ ಕೃಷಿ ಗ್ರಾಮ’ವನ್ನಾಗಿ ಆಯ್ಕೆ ಮಾಡಲಾಗಿತ್ತು.
ಬಸವರಾಜ ಅವರ ನೈಸರ್ಗಿಕ ಕೃಷಿ ಕ್ಷೇತ್ರ ಸಾಧನೆ ಗುರುತಿಸಿ 2018ರಲ್ಲಿ ಕೃಷಿ ಇಲಾಖೆಯಿಂದ ತಾಲೂಕು ಮಟ್ಟದ ಶ್ರೇಷ್ಠ ಸಾವಯವ ಕೃಷಿ ಪ್ರಶಸ್ತಿ, ಜಿಲ್ಲಾಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿ, 2024ರಲ್ಲಿ ಧಾರವಾಡ ಕೃಷಿ ವಿವಿಯಿಂದ ಆವಿಷ್ಕಾರ ರೈತ ಪ್ರಶಸ್ತಿ ಕೂಡ ದೊರೆತಿದೆ. ಅಲ್ಲದೆ, ಇವರ ಕೃಷಿ ಸೇವೆ ಪರಿಗಣಿಸಿ ಅನೇಕ ಸಂಘ, ಸಂಸ್ಥೆಗಳು ಸಹಿತ ಸನ್ಮಾನಿಸಿ ಗೌರವಿಸಿವೆ.
ಕಳೆದುಕೊಂಡ ಆಸ್ತಿಯನ್ನು ಮತ್ತೆ ಸಂಪಾದಿಸಬಹುದು. ಆದರೆ, ಒಮ್ಮೆ ಲವತತ್ತೆ ಕಳೆದುಕೊಂಡ ಕೃಷಿ ಭೂಮಿಯನ್ನು ಮತ್ತೆ ಪಡೆದುಕೊಳ್ಳುವುದು ಕಷ್ಟ. ಆದ್ದರಿಂದ ಪ್ರತಿಯೊಬ್ಬರೂ ನೈಸರ್ಗಿಕ ಕೃಷಿ ಮಾಡಬೇಕು. ಇದರಿಂದ ಉತ್ತಮ ಆಹಾರ, ಶುದ್ಧ ಭೂಮಿ ಹೊಂದಲು ಸಾಧ್ಯ. ಉತ್ತಮ ಭವಿಷ್ಯಕ್ಕೆ ನೈಸರ್ಗಿಕ ಕೃಷಿ ಒಂದೇ ಸಾಧನ.
ಬಸವರಾಜ ಬೆಳವಟಗಿ, ನೈಸರ್ಗಿಕ ಕೃಷಿಕ