ರಾಷ್ಟ್ರ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಪೂರ್ವಭಾವಿ ಸಿದ್ಧತಾ ಸಭೆ. 
ಧಾರವಾಡ

ಡಿ.21ರಿಂದ ರಾಷ್ಟ್ರ್ರೀಯ ಪಲ್ಸ್ ಪೋಲಿಯೋ ಅಭಿಯಾನ

ಧಾರವಾಡ: ಜಿಲ್ಲೆಯಲ್ಲಿ ರಾಷ್ಟ್ರ್ರೀಯ ಪಲ್ಸ್ ಪೋಲಿಯೋ ಅಭಿಯಾನದಡಿ ಡಿ.21ರಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ 5 ವರ್ಷದೊಳಿಗಿನ ಜಿಲ್ಲೆಯ ಸುಮಾರು 2,07,837 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿಯೋಜನೆಗೊಂಡ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಆಶಾ ಕಾರ್ಯಕರ್ತೆಯರು ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಭವನದಲ್ಲಿ ರಾಷ್ಟ್ರ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಯಶಸ್ವಿ ಕಾರ್ಯಾಚರಣೆ ಕುರಿತು ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿ.21ರಿಂದ 24ರವರೆಗೆ ರಾಷ್ಟ್ರ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದoತೆ ನೋಡಿಕೊಳ್ಳಲು ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಒಟ್ಟು 891 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 92 ಟ್ರಾಂಜಿಟ್ ತಂಡಗಳು, 57 ಸಂಚಾರಿ (ಮೊಬೈಲ್) ತಂಡಗಳನ್ನು ರಚಿಸಲಾಗಿದೆ. ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಒಟ್ಟು 3,829 ವ್ಯಾಕ್ಸಿನೆಟರ್ಸ್, 214 ಮೇಲ್ವಿಚಾರಕರಿದ್ದು, ಜಿಲ್ಲೆಯ 4,28,540 ಮನೆಗಳನ್ನು ಲಸಿಕಾ ಅಭಿಯಾನದಡಿ ಸಂದರ್ಶಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಲಸಿಕಾ ದಿನಾಂಕದ ಕುರಿತು, ಪಲ್ಸ್ ಪೋಲಿಯೋ ಕಾರ್ಯಕ್ರಮದ ಮಹತ್ವದ ಕುರಿತು ತಾಯಂದಿರ ಸಭೆಗಳಲ್ಲಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ರೈಲ್ವೆ ಹಳಿಗಳ ಪಕ್ಕದಲ್ಲಿ ವಾಸವಿರುವ ವಲಸೆ ಮಕ್ಕಳಿಗೆ ಲಸಿಕೆ ದೊರಕುವಂತೆ ನೋಡಿಕೊಳ್ಳಬೇಕು. ರೈಲ್ವೆ ನಿಲ್ದಾಣಗಳಲ್ಲಿ ಕಾರ್ಯಕ್ರಮದ ಬಗ್ಗೆ ಆಗಾಗ ಪ್ರಕಟಣೆ ಹೊರಡಿಸಬೇಕು. ಪೋಲಿಯೋ ಲಸಿಕೆ ಹಾಕಲು ರೈಲ್ವೆ ಶಾಲೆಗಳಲ್ಲಿ ಸಹಕರಿಸಬೇಕು. ಪೋಲಿಯೋ ಲಸಿಕೆ ಹಾಕಲು ಬೂತ್‌ಗಳನ್ನು ಆಯೋಜಿಸಲು ಸಹಕರಿಸಬೇಕು ಎಂದು ತಿಳಿಸಿದರು.
ಜಿಪಂ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಹೊನಕೇರಿ, ಡಾ. ಸುಜಾತ ಹಸವೀಮಠ ಹಾಗೂ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರಿಗೆ, ಹೆಸ್ಕಾಂ, ಮಹಾನಗರ ಪಾಲಿಕೆ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.