ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳಿಗೆ (airports) ಮಹನೀಯರ ಹೆಸರಿಡುವಂತೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ, ನಟಿ ಪೂಜಾ ಗಾಂಧಿ, ಶಿವಾನಂದ ಮುತ್ತಣ್ಣವರ, ಇತರರು ಪಾಲ್ಗೊಂಡಿದ್ದರು.
- ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಚಳವಳಿ
- ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.
- 2026ರ ಜನವರಿ 26ರ ಗಡುವು.
ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಹುಬ್ಬಳ್ಳಿ ಚಲೋ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ನೂರಾರು ಜನರು, ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರು ಇಡಲು 2026ರ ಜನವರಿ 26ರ ಗಡುವು ನೀಡಿದ್ದಾರೆ.
ಈ ಅವಧಿಯಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮಾರ್ಚ್ 28ಕ್ಕೆ ಮತ್ತೊಮ್ಮೆ ಹೋರಾಟ ನಡೆಸುವ ಹಾಗೂ ಬಿಜೆಪಿಯ ಶಾಸಕರು ಮತ್ತು ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಶಾಸಕ ಎನ್.ಎಚ್. ಕೋನರಡ್ಡಿ, ನಾಲ್ವರೂ ಮಹನೀಯರ ಹೆಸರುಗಳನ್ನು ಸಂಬಂಧಿಸಿದ ವಿಮಾನ ನಿಲ್ದಾಣಗಳಿಗೆ ಇಡದಿದ್ದರೆ ಬೆಂಗಳೂರು ಹಾಗೂ ದೆಹಲಿ ಚಲೋಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಈ ಭಾಗದ ಪ್ರಮುಖ ನಾಯಕರಾಗಿದ್ದಾರೆ. ಸಂಬಂಧಿಸಿದ ಸಚಿವರೊಂದಿಗೆ ರ್ಚಚಿಸಿ, ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರಿಡಲು ಮುಂದಾಗಬೇಕು.
ಇದರ ಜತೆಗೆ ಮಹದಾಯಿ, ಕಳಸಾ-ಬಂಡೂರಿ ನಾಲಾ ಕಾಮಗಾರಿ ಅನುಷ್ಠಾನ ಹಾಗೂ ಕಿತ್ತೂರು ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿಯೂ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.
ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, ರಾಜ್ಯ ಸರ್ಕಾರ ವಿಮಾನ ನಿಲ್ದಾಣಗಳಿಗೆ ನಾಲ್ವರೂ ಮಹಿನಿಯರ ಹೆಸರಿಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಆದರೂ, ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದರು.
ಮುಖಂಡ ಆನೇಕಲ್ ದೊಡ್ಡಯ್ಯ ಮಾತನಾಡಿ, ಜ. 26ರೊಳಗೆ ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರು ಇಡದಿದ್ದರೆ ರಾಜ್ಯದ ಎಲ್ಲ ಬಿಜೆಪಿ ಶಾಸಕರು ಹಾಗೂ ಸಂಸದ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ನಾಡಿಗೆ ಮಹತ್ತರ ಕೊಡುಗೆ ನೀಡಿರುವ ನಾಲ್ವರೂ ಮಹನೀಯರ ಹೆಸರುಗಳನ್ನು ವಿಮಾನ ನಿಲ್ದಾಣಕ್ಕೆ ಇಡಲು ಕೇಂದ್ರ ಸರ್ಕಾರ ತುರ್ತು ಕ್ರಮಕೈಗೊಳ್ಳಬೇಕು ಎಂದು ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ಶಿವಾನಂದ ಮುತ್ತಣ್ಣವರ ಆಗ್ರಹಿಸಿದರು.
ಸಾನ್ನಿಧ್ಯ ವಹಿಸಿದ್ದ ಬಾಗಲಕೋಟೆಯ ಶ್ರೀ ಸಿದ್ದನಕೊಳ್ಳ ಸ್ವಾಮೀಜಿ, ಮನಸೂರಿನ ಶ್ರೀ ಬಸವರಾಜ ದೇವರು, ಮತ್ತಿಗಟ್ಟಿಯ ಶ್ರೀ ಕೃಷ್ಣಾನಂದ ಸ್ವಾಮೀಜಿ, ಚಿಕ್ಕನಸಬಿಯ ಶ್ರೀ ಶಿವಶಂಕರ ಸ್ವಾಮೀಜಿ, ತಂಗೊಂಡದ ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಜಯಸತ್ಯವರ್ಧನ ಸ್ವಾಮೀಜಿ ಹಾಗೂ ಶ್ರೀ ಸ್ವಾಮಿ ನಾಗಪ್ಪ ವಾಲ್ಮೀಕಿ ಶಿವಶರಣರು ಮಾತನಾಡಿದರು.
ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಮೇಯರ್ ಅನಿಲ ಪಾಟೀಲ, ಅಡಿವೆಪ್ಪ ಶಿವಳ್ಳಿ, ಚಂದ್ರಶೇಖರ ಜುಟ್ಟಲ, ತಾರಾದೇವಿ ವಾಲಿ, ಗುರು ರಾಯನಗೌಡ್ರ, ಡಿ.ಟಿ. ಪಾಟೀಲ ಹಾಗೂ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮೊದಲು ಚನ್ನಮ್ಮ ವೃತ್ತದಿಂದ ಚಿಟಗುಪ್ಪಿ ಆಸ್ಪತ್ರೆ ಬಳಿ ಹಾಕಿದ್ದ ವೇದಿಕೆವರೆಗೆ ಡೊಳ್ಳು ಹಾಗೂ ಇನ್ನಿತರ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.