ಗರ್ಭಿಣಿ ಕೊಂದ (murder) ಪಾಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಂತೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ದಲಿತ ಸಂಘಟನೆಗಳ ಮುಖಂಡರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಹುಬ್ಬಳ್ಳಿ: ಅನ್ಯ ಜಾತಿ ಯುವಕನನ್ನು ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ತಾಲೂಕಿನ ಇನಾಂವೀರಾಪೂರ ಗ್ರಾಮದಲ್ಲಿ ಮಗಳನ್ನು ಕೊಂದ (murder) ತಂದೆ ಸಹಿತ ಮೂವರನ್ನು ಹುಬ್ಬಳ್ಳಿ ಗ್ರಾಮಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಂದೆ ಪ್ರಕಾಶಗೌಡ ಪಾಟೀಲ, ಸಂಬಂಧಿಗಳಾದ ವೀರನಗೌಡ ಹಾಗೂ ಅರುಣಗೌಡ ಬಂಧಿತರು. ಮಾನ್ಯಾ ವಿವೇಕಾನಂದ ದೊಡ್ಡಮನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕಾನಂದ ಕುಟುಂಬದವರು ಒಟ್ಟು 18 ಜನರ ವಿರುದ್ಧ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮರಣೋತ್ತರ ಪರೀಕ್ಷೆ: ಮಾನ್ಯಾ ದೊಡ್ಡಮನಿ ವಿವೇಕಾನಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸೋಮವಾರ ಬೆಳಗ್ಗೆ ಕೆಎಂಸಿಆರ್‌ಐನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಪೊಲೀಸರ ಸಮ್ಮುಖದಲ್ಲಿ ಮಾನ್ಯಾ ಶವವನ್ನು ವಿವೇಕಾನಂದ ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು. ಶವವನ್ನು ವಾಹನದಲ್ಲಿ ಇನಾಂವೀರಾಪೂರಕ್ಕೆ ತೆಗೆದುಕೊಂಡು ಹೋಗುವ ದಾರಿ ಮಧ್ಯದ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಇದೇ ವೇಳೆ ಪ್ರತಿಭಟನಾ ಮೆರವಣಿಗೆ ನಡೆಸಿದ ದಲಿತ ಸಂಘಟನೆಗಳ ಮುಖಂಡರು, ಮಗಳ ಕೊಂದ ಪಾಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು. ನಂತರ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಮೃತ ಮಾನ್ಯಾಳ ಅಂತ್ಯಸಂಸ್ಕಾರ ನೆರವೇರಿಸಲಾಯಿತು.