Mundhe banni ಹುಬ್ಬಳ್ಳಿಯ ಕೆಎಲ್ಇ ಟೆಕ್ ವಿವಿಯಲ್ಲಿ ಶನಿವಾರ ಏರ್ಪಡಿಸಿದ್ದ ಮುಂದೆ ಬನ್ನಿ ಕಾರ್ಯಕ್ರಮವನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಉದ್ಘಾಟಿಸಿದರು. ಡಾ. ಅಶೋಕ ಶೆಟ್ಟರ್, ಡಾ. ಪ್ರಕಾಶ ತೆವರಿ, ವಸಂತ ಶೆಟ್ಟಿ, ಚೇತನ ಶೆಟ್ಟರ್ ಇತರರು ಇದ್ದರು.
- ಮುಂದೆ ಬನ್ನಿ ಮೀಟ್ ಅಪ್ ಹುಬ್ಬಳ್ಳಿ
- ಉಕ ಆಸಕ್ತರು ಯುವಕರಿಗೆ ಪ್ರೇರಣೆ
- ರೈಸ್ ಇನ್ ನಾರ್ತ್ ಕರ್ನಾಟಕ
ಹುಬ್ಬಳ್ಳಿ: Mundhe banni ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯುತ್ತಮ ಪ್ರತಿಭಾವಂತರಿದ್ದಾರೆ. ಅವರಿಗೆ ಅವಕಾಶ ಸಿಗದೇ ಬೇರೆ ನಗರಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಇದೀಗ ಮುಂದೆ ಬನ್ನಿ ಎನ್ನುವ ಮೂಲಕ ಇಲ್ಲಿಯೇ ಉದ್ಯೋಗ ಕಲ್ಪಿಸುವ ಪರಿಕಲ್ಪನೆ ಸ್ಫೂರ್ತಿದಾಯಕವಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
ಇಲ್ಲಿಯ ಬಿವಿಬಿ ಆವರಣದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮುಂದೆ ಬನ್ನಿ ಮತ್ತು ಕೆಎಲ್ಇ ಸಿಟೈ ವತಿಯಿಂದ ಶನಿವಾರ ಏರ್ಪಡಿಸಿದ್ದ "ಮುಂದೆ ಬನ್ನಿ ಮೀಟ್ ಅಪ್ ಹುಬ್ಬಳ್ಳಿ' ಉತ್ತರ ಕರ್ನಾಟಕದ ಉದ್ಯಮಶೀಲತೆಯನ್ನು ಸಂಭ್ರಮಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದೊಂದು ಒಳ್ಳೆಯ ಆಲೋಚನೆ, ಸಾಮಾಜಿಕ ಪ್ರಗತಿಯ ದೃಷ್ಟಿಯಿಂದ ಉತ್ತಮ ವೇದಿಕೆಯಾಗಿದೆ. ಉದ್ಯಮ ಸ್ಥಾಪಿಸುವುದು ನಮಗೂ ಸಾಧ್ಯವೇ? ಎಂದು ವಿದ್ಯಾರ್ಥಿಗಳು, ಆಸಕ್ತರು ಯೋಚಿಸುವಂತೆ ಮಾಡುತ್ತದೆ ಎಂದರು.
ಕೆಎಲ್ಇ ಟೆಕ್ ವಿವಿ ಕುಲಪತಿ ಡಾ. ಪ್ರಕಾಶ ತೆವರಿ ಮಾತನಾಡಿ, ಕರ್ನಾಟಕವು ಅಪರಿಮಿತ ಪ್ರತಿಭೆಯನ್ನು ಹೊಂದಿದೆ. ಆದರೆ, ಅನೇಕರಿಗೆ ಮುನ್ನುಗ್ಗುವ ಧೈರ್ಯ ಇರುವುದಿಲ್ಲ. ಈ ದಿಸೆಯಲ್ಲಿ ಹಿಂಜರಿಕೆ ಸರಿಸಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮುಂದೆ ಬನ್ನಿ ಮಾಡಲಿದೆ. ಹಲವು ಸಾಧಕರು ಸೇರಿ ಇದನ್ನು ಆರಂಭಿಸಿರುವುದರಿಂದ ಈ ಭಾಗದ ಯುವಕರಿಗೆ ಅನುಕೂಲವಾಗಲಿದೆ ಎಂದರು.
ಹೆಗ್ಗೆರುತಾಗುವ ಕ್ರಮ
ಕೆಎಲ್ಇ ತಾಂತ್ರಿಕ ವಿವಿ ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ್ ಮಾತನಾಡಿ, ಈ ಭಾಗದ ಪ್ರತಿಭಾವಂತರ ವಲಸೆ ತಡೆಯಲು ಇದೊಂದು ಮಹತ್ವದ ಹೆಗ್ಗುರುತಾಗಲಿದೆ. ಉನ್ನತ ವ್ಯಾಸಂಗದ ನಂತರ ಅನೇಕರು ಬೇರೆ ಶಹರಗಳಿಗೆ ಉದ್ಯೋಗ ಅರಸಿ ಹೋಗುತ್ತಿರುವುದರಿಂದ ಎಷ್ಟೋ ವೃದ್ಧ ತಂದೆ ತಾಯಿ ಏಕಾಂಗಿ ಜೀವನ ಸಾಗಿಸುವಂತಾಗಿದೆ. ಇದು ಅನೇಕ ಕೌಟುಂಬಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಒಂದು ಸಮೀಕ್ಷೆ ಪ್ರಕಾರ ಶೇ. 90ರಷ್ಟು ಜನ ವಲಸೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಕೆಎಲ್ಇ ಟೆಕ್ ಇತರ ಸಂಸ್ಥೆಗಳೊಂದಿಗೆ ಸೇರಿ ಕನ್ನಡದ ಮನಸುಗಳಿಗೆ ಇಲ್ಲಿಯೇ ಕೆಲಸ ಒದಗಿಸುವ ವಾತಾವರಣ ಸೃಷ್ಟಿಸಲು ಶ್ರಮಿಸುತ್ತಿದೆ ಎಂದರು.
ಮುಂದೆ ಬನ್ನಿ ಹಾಗೂ "ರಿಂಕ್ (ರೈಸ್ ಇನ್ ನಾರ್ಥ್ ಕರ್ನಾಟಕ) ಲೈವ್ ಬೆಟರ್ ಹಾಗೂ ಬಿಲ್ಡ್ ಬಿಗ್ ನಮ್ಮ ಊರು' ಕಲ್ಪನೆಯೊಂದಿಗೆ ಹೊಸ ವೇದಿಕೆ ಸೃಷ್ಟಿಸಲಾಗುತ್ತಿದೆ. ಇದರಿಂದ ಅನೇಕರು ವಾಪಸ್ ಬಂದು ಹುಬ್ಬಳ್ಳಿ- ಧಾರವಾಡ ಸೇರಿ ದ್ವೀತಿಯ ಹಾಗೂ ತೃತೀಯ ದರ್ಜೆ ನಗರಗಳಲ್ಲಿ ಹೂಡಿಕೆ ಮಾಡಲು ಪ್ರೇರಣೆ ನೀಡಲಿದೆ ಎಂದರು.
ಮುಂದೆ ಬನ್ನಿ ಸಂಸ್ಥಾಪಕ ವಸಂತ ಶೆಟ್ಟಿ ಮಾತನಾಡಿ, ಕರ್ನಾಟಕದ ವಿಶೇಷವಾಗಿ ಟೈರ್-2 ಮತ್ತು ಟೈರ್ -3 ನಗರಗಳ ಉದ್ಯಮಿಗಳನ್ನು ಪ್ರೋತ್ಸಾಹಿಸುವ, ಸಮುದಾಯ ಆಧಾರಿತ ವೇದಿಕೆ ಇದಾಗಿದೆ. ಪಾಡ್ಕಾಸ್ಟ್ಗಳು, ವೆಬಿನಾರ್ಗಳು, ಮೀಟ್ ಅಪ್ಗಳು ಹಾಗೂ ಇನ್ಕ್ಯೂಬೇಷನ್ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಯ ಸ್ಥಾಪಕರನ್ನು ಪ್ರೇರೇಪಿಸುವ ಮತ್ತು ಶಕ್ತಿಯುತಗೊಳಿಸುವ ಗುರಿ ಹೊಂದಿದೆ ಎಂದರು.
ಇದುವರೆಗೂ ಬಿಜಿನೆಸ್ ಕುರಿತ ಚರ್ಚೆಗಳು ಕನ್ನಡದಲ್ಲಿ ನಡೆಯುತ್ತಿರಲಿಲ್ಲ. ಕನ್ನಡದವರಿಗಾಗಿ ಏನೆಲ್ಲ ಅವಕಾಶಗಳಿವೆ ಎಂಬುದನ್ನು ಮಾತೃಭಾಷೆಯಲ್ಲಿ ತಿಳಿಸಿಕೊಡುವ ಪ್ರಯತ್ನ ಇದಾಗಿದೆ. ಹೆಚ್ಚು ಬಂಡವಾಳ ಇಲ್ಲದಿದ್ದರೂ ಉದ್ಯಮದಲ್ಲಿ ಹೇಗೆ ಯಶಸ್ಸು ಸಾಧಿಸಬಹುದು ಎಂದು ತಿಳಿಸಿಕೊಡಲಿದೆ ಎಂದರು.
ರಿಂಕ್ ಕುರಿತು ಮಾಹಿತಿ ಹಂಚಿಕೊಂಡ ಚೇತನ್ ಶೆಟ್ಟರ್, ಈ ಭಾಗದಲ್ಲಿ ಆತ್ಮವಿಶ್ವಾಸದಿಂದ ಉದ್ಯಮ ಹೇಗೆ ಆರಂಭಿಸಬೇಕು, ಇಲ್ಲಿಗೆ ಬಂದರೆ ಏನೇನು ಅವಕಾಶಗಳಿವೆ, ಬಂದ ನಂತರ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಡಲು ವೇದಿಕೆ ಸಿದ್ಧಪಡಿಸಲಾಗಿದೆ. ಹಾಗಾಗಿ ಯಾವುದೇ ಅಳುಕಿಲ್ಲದೇ ಉದ್ಯಮ ಸ್ಥಾಪಕರು ಬರಬಹುದು ಎಂದರು.
ಸಫಾ, ನೂಯಿ ಕಾರ್ಯಕ್ರಮ ನಿರೂಪಿಸಿದರು. ವಿನಾಯಕ ಹೊಸಮನಿ ಸ್ವಾಗತಿಸಿದರು.
ವಿನೋದ ಶಂಕರ, ನಿಹಾಲ್ ಶೆಟ್ಟಿ, ದೇವರಾಜ ಆರ್, ರಫೀಕ ಅಸ್ಲಂ ಇತರರು ಇದ್ದರು. ನಂತರ ವಿವಿಧ ಗೋಷ್ಠಿಗಳು ನಡೆದವು.