mumbai train ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ರೈಲು ನಿಲ್ದಾಣದಲ್ಲಿ ಭಾನುವಾರ ಬೆಂಗಳೂರು- ಮುಂಬೈ ರೈಲಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಸಿರು ನಿಶಾನೆ ತೋರಿದರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಫ್..ಎಚ್. ಜಕ್ಕಪ್ಪನವರ, ಪ್ರದಿಪ ಶೆಟ್ಟರ, ಇತರರು ಇದ್ದರು.
- ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಮತ
- ಬೆಂಗಳೂರು ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಚಾಲನೆ
ಹುಬ್ಬಳ್ಳಿ: mumbai train ಕಾರವಾರದ ಬೇಲೆಕೇರಿ ಸೇರಿದಂತೆ ಎರಡು ಕಡೆ ಬಂದರುಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದ್ದು, ಬಂದರು ಹಾಗೂ ಅಂಕೋಲಾ ರೈಲು ಯೋಜನೆ ಜಾರಿಯಾದರೆ ಹುಬ್ಬಳ್ಳಿ ಕೇಂದ್ರಿತ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.
ಇಲ್ಲಿಯ ಶ್ರೀ ಸಿದ್ಧಾರೂಢಸ್ವಾಮಿ ರೈಲು ನಿಲ್ದಾಣದಲ್ಲಿ ಭಾನುವಾರ ಬೆಂಗಳೂರು- ಮುಂಬೈ ಸೂಪರ್ ಫಾಸ್ಟ್ ನೂತನ ರೈಲಿಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಬ್ಬಳ್ಳಿ - ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯವಾದ ವನ್ಯಜಿವಿ ಮಂಡಳಿ ಅನುಮತಿಗೆ ಬಹಳ ಪ್ರಯತ್ನ ನಡೆದಿದ್ದು, ಇದು ಒಂದು ಹಂತಕ್ಕೆ ಬಂದಿದೆ. ಅತ್ಯಂತ ಶೀಘ್ರ ಈ ಯೋಜನೆ ಕೈಗೂಡುವ ನಿರೀಕ್ಷೆ ಇದೆ ಎಂದರು.
ಭೂಸ್ವಾಧಿನ ಅಗತ್ಯ
ಧಾರವಾಡ- ಬೆಳಗಾವಿ ಮಧ್ಯೆ ನೇರ ರೈಲು ಸಲುವಾಗಿ ಕೇಂದ್ರ ಸರ್ಕಾರ ಸಾವಿರ ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಿದೆ. ಅಗತ್ಯ ಜಮೀನು ರಾಜ್ಯ ಸರ್ಕಾರ ಕೊಡಿಸಿದರೆ ತಕ್ಷಣ ಕಾಮಗಾರಿ ಆರಂಭವಾಗಲಿದೆ. ತುಮಕೂರು- ದಾವಣಗೆರೆ ಮಧ್ಯೆಯೂ ಶೇ. 15ರಷ್ಟು ಭೂಸ್ವಾಧಿನ ಬಾಕಿ ಇದೆ. ಇದು ಪೂರ್ಣಗೊಂಡಲ್ಲಿ ಬೆಂಗಳೂರು- ಮುಂಬೈ ರೈಲಿನ ಪ್ರಯಾಣ ಸಮಯದಲ್ಲಿ ಮತ್ತೆ ಮೂರು ತಾಸು ಕಡಿತವಾಗಲಿದೆ ಎಂದು ಸಚಿವ ಜೋಶಿ ಹೇಳಿದರು.
ವಿದ್ಯುದಿಕರಣ ಪೂರ್ಣ:
ದೇಶದಲ್ಲಿ ರೈಲ್ವೆ ವಿದ್ಯುದಿಕರಣ ಬಹುತೇಕ ಪೂರ್ಣಗೊಂಡಿದೆ. ವಿದ್ಯುದಿಕರಣದಲ್ಲಿ ಭಾರತವು ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿ ಇದೆ. ಪ್ರತ್ಯೇಕವಾಗಿದ್ದ ರೈಲ್ವೆ ಬಜೆಟ್ ರದ್ದು ಪಡಿಸಲಾಗಿದೆ. ಆದರೆ, ಈ ಮೊದಲಿಗಿಂತ ರೈಲ್ವೆ ಇಲಾಖೆಗೆ ಹಣ ನೀಡಿಕೆಯಲ್ಲಿ ಬಹಳಷ್ಟು ಹೆಚ್ಚಾಗಿದೆ. ಕಳೆದ ಬಾರಿ 2.80 ಲಕ್ಷ ಕೋಟಿ ರೂ. ರೈಲ್ವೆಗೆ ನೀಡಲಾಗಿದೆ ಎಂದರು.
ಹುಬ್ಬಳ್ಳಿ ರೈಲು ನಿಲ್ದಾಣವನ್ನು ವಿಶ್ವ ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ. 400 ಕೋಟಿ ರೂ. ಪ್ರಸ್ತಾವನೆಯನ್ನು ಇಲಾಖೆ ನೀಡಿದ್ದು, ಕಾಮಗಾರಿ ಕೈಗೊಳ್ಳಲಾಗುತ್ತದೆ. ಅಳ್ನಾವರ ರೈಲು ನಿಲ್ದಾಣ ಅಭಿವೃದ್ಧಿ ಪೂರ್ಣಗೊಂಡಿದ್ದು, ಉದ್ಘಾಟನೆಯೂ ನಡೆಯಲಿದೆ.