ಧಾರವಾಡ ತಾಲೂಕಿನ ಬೋಗೂರು ಗ್ರಾಮದಲ್ಲಿ ಸ್ಥಾಪಿಸಿರುವ ಪಂಜಾಗಳು. 
ಧಾರವಾಡ

ಮುಸ್ಲಿಂರಿಲ್ಲದ ಊರಲ್ಲಿ ಮೊಹರಂ ಆಚರಣೆ!

ಧಾರವಾಡ: ಶೋಕ, ತ್ಯಾಗದ ಸಂಕೇತವಾದ `ಮೊಹರಂ' ಹಬ್ಬವನ್ನು ಮುಸ್ಲಿಂರಿಲ್ಲದ ಊರಲ್ಲಿ ಹಿಂದೂಗಳೇ ಒಟ್ಟಾಗಿ ಸೇರಿ ಆಚರಿಸುತ್ತಿರುವುದು ಮಾದರಿಯಾಗಿದೆ...!
ಹೌದು. ಧಾರವಾಡ ತಾಲೂಕಿನ ಗುಳೇದಕೊಪ್ಪದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಗೂರು ಗ್ರಾಮದಲ್ಲಿ ಸುಮಾರು ಒಂದು ಸಾವಿರ ಜನಸಂಖ್ಯೆ ಇದೆ. ಒಬ್ಬರೂ ಮುಸ್ಲಿಮ್ ಸಮುದಾಯದವರಿಲ್ಲ. ಅಷ್ಟಾದಾರೂ ಹಿಂದೂಗಳೇ ಹಲವು ವರ್ಷಗಳಿಂದ ಮೊಹರಂ ಹಬ್ಬವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದಾರೆ.
ಹಿಂದೂಗಳು ಒಟ್ಟಾಗಿ ಮುಸ್ಲಿಮ್ ಪದ್ಧತಿ ಪ್ರಕಾರ ಪಂಜಾಗಳನ್ನು ಪೂಜಿಸುತ್ತಾರೆ. ಇದಕ್ಕೆ ತಗಲುವ ಖರ್ಚು ಸಹಿತ ಪರಸ್ಪರ ಹಣ ಸಂಗ್ರಹಿಸುತ್ತಾರೆ. ಈ ಹಬ್ಬದ ಆಚರಣೆಯಿಂದ ಗ್ರಾಮಸ್ಥರ ಒಗ್ಗಟ್ಟು ಹೆಚ್ಚಾಗಿದ್ದು, ಗ್ರಾಮವು ಭಾವೈಕ್ಯತೆಗೆ ಮಾದರಿಯಾಗಿ ನಿಂತಿದೆ.
ಹಿಂದೂಗಳು ಹರಕೆ ಹೊತ್ತು ಪಂಜಾಗಳನ್ನು ಪೂಜಿಸುತ್ತಾರೆ. ವಿಶೇಷವೆಂದರೆ ಪ್ರತಿಯೊಂದು ಪಂಜಾವನ್ನು ಹಿಂದೂಗಳೇ ಹೊತ್ತುಕೊಂಡು ಆರಾಽಸುತ್ತಾರೆ. ಹಬ್ಬದ ಕೊನೆಯ ದಿನದಂದು ಹಿಂದೂ ವ್ಯಕ್ತಿಗಳೇ ಪಂಜಾಗಳನ್ನು ಹಿಡಿದು ಮೇಮೇಲೆ ದೇವರನ್ನು ಆಹ್ವಾನಿಸಿಕೊಂಡು ಕಿಚ್ಚು ಹಾಯುತ್ತಾರೆ.
ಜನರು ಅವರ ಕಾಲಿಗೆ ನಮಸ್ಕರಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ. ದೇವರ ಮಂತ್ರ ಪಠಿಸಲು ಮಾತ್ರ ಬೇರೆ ಊರಿನ ಇಬ್ಬರು ಮುಸ್ಲಿಮ್‌ರನ್ನು ಕರೆಸಲಾಗುತ್ತದೆ. ಹೀಗೆ ಪಂಜಾ ಪ್ರತಿಷ್ಠಾಪನೆಯಿಂದ ಹಿಡಿದು ಹೊಳೆಗೆ ಕಳುಹಿಸುವರಿಗಿನ ಎಲ್ಲ ಕಾರ್ಯಗಳನ್ನು ಹಿಂದೂಗಳೇ ಮಾಡುತ್ತಾರೆ.
ರಂಗ ಮಂದಿರದಲ್ಲಿ ಪೂಜೆ:
ಗ್ರಾಮದ ಹನುಮಂತ ದೇವರ ಗುಡಿಯಲ್ಲಿ ಹಲವು ವರ್ಷಗಳಿಂದ ಡೋಲಿಗಳನ್ನು ಕಟ್ಟಿ ಪೂಜಿಸುತ್ತ ಬರಲಾಗಿದೆ. ಈ ವರ್ಷ ದೇವಸ್ಥಾನ ಸೋರುತ್ತಿರುವುದರಿಂದ ದೇವಸ್ಥಾನ ಬದಲಿಗೆ ಗ್ರಾಮದ ರಂಗ ಮಂದಿರಲ್ಲಿ ಡೋಲಿಗಳನ್ನು ಪೂಜಿಸಲಾಗುತ್ತಿದೆ. ಮುಸ್ಲಿಂ ಹಬ್ಬವೆಂಬ ಭಾವನೆ ಗ್ರಾಮದ ಜನರಿಗಿಲ್ಲ. ಹಬ್ಬಕ್ಕೆ ಯಾವುದೇ ಚ್ಯುತಿ ಇಲ್ಲದಂತೆ ಗ್ರಾಮಸ್ಥರು ಆಚರಿಸುತ್ತ ಬಂದಿದ್ದಾರೆ.
ದೇವರ ಮಂತ್ರ ಪಟಿಸುವುದಕ್ಕೆ ಮಾತ್ರ ಮುಗಳಿ ಗ್ರಾಮದಿಂದ ನಾವು ಇಬ್ಬರು ಮುಸ್ಲಿಂರನ್ನು ಕರೆಸುತ್ತೇವೆ. ದೇವರನ್ನು ಹೊರುವುದು, ಪೂಜಿಸುವುದು ಸೇರಿ ಹಬ್ಬದ ಎಲ್ಲ ಕಾರ್ಯಕ್ರಮಗಳನ್ನು ಹಿಂದೂಗಳೇ ಮಾಡುತ್ತೇವೆ. ನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಊರಿನಲ್ಲಿ ಮೊಹಂ ಹಬ್ಬವನ್ನು ಆಚರಿಸುತ್ತ ಬರಲಾಗಿದ್ದು, ಮುಂದುವರಿದೆ. ಗ್ರಾಮದ ಪುರುಷರಿಗಿಂತ ಮಹಿಳೆಯರೂ ಹಬ್ಬ ಆಚರಣೆ ಮುಂದಿರುತ್ತಾರೆ ಎಂದು ಗ್ರಾಪಂ ಸದಸ್ಯ ಮಂಜು ಹೊಸಮನಿ ಹೇಳುತ್ತಾರೆ.