ಉಪ್ಪಿನಬೆಟಗೇರಿ ಗ್ರಾಮದ ಸಸಿ ಮಸೂತಿಯಲ್ಲಿ ಪ್ರತಿಷ್ಠಾಪಿಸಿರುವ ಐತಿಹಾಸಿಕ ಸಸಿ ಡೋಲಿ.
ಶಿವಪ್ರಭು ಈಸರಗೊಂಡ ಉಪ್ಪಿನಬೆಟಗೇರಿ
ತ್ಯಾಗ, ಬಲಿದಾನದ ಮೊಹರಂ ಹಬ್ಬವನ್ನು ಗ್ರಾಮದಲ್ಲಿ ಶುಕ್ರವಾರ ಹಿಂದೂ-ಮುಸ್ಲಿಮರು ಭಾವೈಕ್ಯದಿಂದ ಆಚರಿಸಲು ಸಿದ್ಧತೆ ಆರಂಭಿಸಿದ್ದಾರೆ. ಆದರೆ, ಐತಿಹಾಸಿಕ ಹಿನ್ನೆಲೆಯುಳ್ಳ ಸಸಿ ಡೋಲಿಯನ್ನು ಉತ್ತರ ಕರ್ನಾಟಕದ ವಿಜಯಪುರ ಹೊರತುಪಡಿಸಿ ಉಪ್ಪಿನಬೆಟಗೇರಿ ಗ್ರಾಮದಲ್ಲಿ ತಯಾರಿಸಲಾಗುತ್ತದೆ ಎಂಬುದು ವಿಶೇಷ.
ಬೇರೆ ಕಡೆಗೆ ಕಾಗದ ಹಾಗೂ ಇತರ ವಸ್ತುಗಳಿಂದ ತಯಾರಿಸಿದ ಡೋಲಿಗಳನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡುತ್ತಾರೆ. ಆದರೆ, ಉಪ್ಪಿನಬೆಟಗೇರಿ ಮತ್ತು ವಿಜಯಪುರದಲ್ಲಿ ಎರಡು ಸಸಿ ಡೋಲಿಗಳನ್ನು ತಯಾರಿಸಿ ಮೆರವಣಿಗೆ ಮಾಡುತ್ತಾರೆ. ವಿಜಯಪುದಲ್ಲಿ ಮಣ್ಣಿನಲ್ಲಿ ಬೀಜ ನೆಟ್ಟು ಸಸಿ ಬೆಳೆಸಿದರೆ, ಉಪ್ಪಿನಬೆಟಗೇರಿಯಲ್ಲಿ ಜೈದರ ಹತ್ತಿಯ ಮೇಲೆ ಸಸಿಗಳನ್ನು ಬೆಳೆಸುತ್ತಾರೆ.
ಡೋಲಿಯ ವಿಶೇಷತೆ: ಸಾಮಾನ್ಯವಾಗಿ ಮಣ್ಣಿನಲ್ಲಿ ಎಲ್ಲ ತರಹದ ಬೀಜಗಳು ಹುಟ್ಟುತ್ತವೆ. ಆದರೆ, ಹತ್ತಿಯಲ್ಲಿ ಸಸಿ ಬೆಳೆಯುವುದು ಇಲ್ಲಿನ ವಿಶೇಷ. ಗ್ರಾಮದ ಹಳೆಯ ಬಸ್ ನಿಲ್ದಾಣದ ಸಮೀಪ ಇರುವ ಸಸಿ ಮಸೂತಿಯಲ್ಲಿ ಮೊಹರಂ ಚಂದ್ರದರ್ಶನದ ನಂತರ ಈ ಸಸಿ ಡೋಲಿ ತಯಾರಿ ನಡೆಯುತ್ತದೆ. ಡೋಲಿ ತಯಾರಿಸುವವರು ಕಡ್ಡಾಯವಾಗಿ ಮಡಿ ಹುಡಿಯಿಂದ ಹತ್ತಿಯಲ್ಲಿನ ಬೀಜ, ಕಸ, ಕಡ್ಡಿಗಳನ್ನು ಬೇರ್ಪಡಿಸಿ ಶುದ್ಧ ಮಾಡಿ ಬಿದಿರಿನಿಂದ ತಯಾರಿಸಿದ ಡೋಲಿಯ ಮೇಲೆ ಹತ್ತಿಯನ್ನು ದಪ್ಪ ಮಾಡಿ ಹಚ್ಚುತ್ತಾರೆ. ಅದು ಕೆಳಗೆ ಬೀಳದ ಹಾಗೆ ದಾರದಿಂದ ಸುತ್ತಿ ನೀರಿನಲ್ಲಿ ನೆನೆಸಿ ಹೊದಿಕೆ ಭದ್ರಪಡಿಸುತ್ತಾರೆ. ತೊಯ್ದ ಹತ್ತಿಯ ಮೇಲೆ ಕೈಯಿಂದ ಅಳವಿ ಬೀಜಗಳನ್ನು ಲೇಪಿಸುತ್ತಾರೆ. ಬೀಜಗಳು ಕ್ರಮೇಣ 3 ರಿಂದ 4 ದಿನಗಳಲ್ಲಿ 2 ರಿಂದ 3 ಇಂಚು ಬೆಳೆಯುತ್ತವೆ. ಈ ಡೋಲಿಯನ್ನು ತಯಾರಿಸಿದ ನಂತರ ಮುಕ್ತ ಪ್ರವೇಶದವರೆಗೂ ಮಹಿಳೆಯರಿಗೆ ನೋಡಲು ಅವಕಾಶವಿಲ್ಲ. ಪ್ರತಿದಿನ ಇದರ ಬಗ್ಗೆ ಗಮನ ಹರಿಸಲು ನಾಲ್ಕೈದು ಜನರ ತಂಡ ಕಾರ್ಯ ನಿರ್ವಹಿಸುತ್ತದೆ. ಅಲಾಹಿ ದೇವರು ಹೊಳೆಗೆ ಹೋಗುವ ದಿನ ಈ ಡೋಲಿಯನ್ನು ಹೊತ್ತುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮೂಲ ಸ್ಥಳಕ್ಕೆ ಒಯ್ಯುತ್ತಾರೆ.
ಇತಿಹಾಸ ಪ್ರಸಿದ್ಧ ಡೋಲಿ: ಹಿರಿಯರ ಪ್ರಕಾರ ಸಸಿ ಡೋಲಿಯು ಕ್ರಿ.ಶ.1551ರಲ್ಲಿ ವಿಜಯಪುರ ಗ್ರಾಮದವರೇ ಆಗಿದ್ದ ಅನ್ಸಾರಿ ಸಾಹೇಬ ವಿಜಾಪೂರ ಎಂಬ ಕುಟುಂಬ ಉಪ್ಪಿನಬೆಟಗೇರಿಗೆ ವಲಸೆ ಬಂದು ನೆಲೆಸಿದ್ದರು. ಪ್ರತಿವರ್ಷ ಜರುಗುವ ಮೊಹರಂ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಬೇಕು ಎಂದು ನಿರ್ಧರಿಸಿ ವಿಜಯಪುರದಲ್ಲಿರುವ ಹಾಗೆ ಒಂದು ಸಸಿ ಡೋಲಿಯನ್ನು ಸ್ಥಾಪಿಸಬೇಕೆಂದು ತಿಳಿದು ತಾವು ವಾಸವಿದ್ದ ಮನೆಯ ಹತ್ತಿರ ಮಸೀದಿಯೊಂದನ್ನು ನಿರ್ಮಿಸಿ ಅದರಲ್ಲಿ ಸಸಿ ಡೋಲಿ ಪ್ರತಿಷ್ಠಾಪನೆಗೆ ಚಾಲನೆ ನೀಡಿದರು.
ಬೆಳೆ ನಿರ್ಧಾರ: ರೈತರು ಬೆಳೆಯುವಂತಹ ದವಸ-ಧಾನ್ಯಗಳು ಈ ಸಸಿ ಡೋಲಿಯನ್ನು ಅವಲಂಬಿಸಿವೆ ಎನ್ನುತ್ತಾರೆ ಹಿರಿಯರು. ಈ ಡೋಲಿಯಲ್ಲಿ ಸಸಿಗಳು ಯಾವ ರೀತಿಯಲ್ಲಿ ಬೆಳೆಯುತ್ತವೆಯೋ ಅದೇ ತೆರನಾಗಿ ನಮ್ಮ ಮುಂದಿನ ಬೆಳೆಗಳು ಹುಲುಸಾಗಿ ಬೆಳೆಯುತ್ತದೆ ಎಂಬುವುದು ಈ ಗ್ರಾಮಸ್ಥರ ನಂಬಿಕೆಯಾಗಿದೆ.
ಐತಿಹಾಸಿಕ ಹಿನ್ನೆಲೆಯುಳ್ಳ ಸಸಿ ಡೋಲಿಯನ್ನು ಉತ್ತರ ಕರ್ನಾಟಕದ ವಿಜಯಪುರ ಹೊರತುಪಡಿಸಿ ಉಪ್ಪಿನಬೆಟಗೇರಿ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಇದರ ವಿಶೇಷತೆ ಎಂದರೆ, ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರತಿವರ್ಷ ಮೊಹರಂ ಹಬ್ಬಕ್ಕೆ ಇಲ್ಲಿ ಬಂದು ಬೇಡಿಕೊಳ್ಳುತ್ತಾರೆ. ಇಷ್ಟಾರ್ಥ ಸಿದ್ಧಿಸಿದವರು, ಕಾಣಿಕೆ ಹಾಗೂ ವಸ್ತು ರೂಪದಲ್ಲಿ ಹರಕೆ ತೀರಿಸುತ್ತಾರೆ.
— ಮಹಾವೀರ ಅಷ್ಟಗಿ, ಜೈನ್ ಸಮಾಜದ ಅಧ್ಯಕ್ಷ ಉಪ್ಪಿನಬೆಟಗೇರಿ.