inauguration 
ಧಾರವಾಡ

ನಿಡೆಕ್ ಕಂಪನಿಯ ಆರ್ಚರ್ಡ್ ಹಬ್‌ಗೆ ಸಚಿವ ಚಾಲನೆ Nidec

ಧಾರವಾಡ: ತಾಲೂಕಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಜಪಾನ್ ಮೂಲದ ನಿಡೆಕ್ nidec ಕಂಪನಿಯು 600 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಿರುವ ಆರ್ಚರ್ಡ್ ಹಬ್‌ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಶುಕ್ರವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನಿಡೆಕ್ ಕಂಪನಿ ಸ್ಥಾಪನೆಗೆ 5 ತಿಂಗಳ ಹಿಂದೆ ನಾನೇ ಭೂಮಿಪೂಜೆ ನೆರವೇರಿಸಿದ್ದೆ. ಕಂಪನಿಯು ಕೇಳಿದ್ದ ಸವಲತ್ತುಗಳನ್ನು ರಾಜ್ಯ ಸರ್ಕಾರವು ತ್ವರಿತವಾಗಿ ಪೂರೈಸಿದೆ. ಇದಕ್ಕೆ ತಕ್ಕಂತೆ ಕಂಪನಿಯು ಕ್ಷಿಪ್ರ ಗತಿಯಲ್ಲಿ ಅಗಾಧ ಬಂಡವಾಳ ಹೂಡಿ ಆಧುನಿಕ ಕೇಂದ್ರವನ್ನು ಸ್ಥಾಪಿಸಿರುವುದು ಮಾದರಿಯಾಗಿದೆ ಎಂದರು.
ನಿಡೆಕ್ ಕಂಪನಿಯ ಆರ್ಚರ್ಡ್ ಹಬ್ ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಉದ್ಯಮ ಕೇಂದ್ರವಾಗಿದೆ. ಇಲ್ಲಿ ಹೊಸ ಔದ್ಯಮಿಕ ಕಲ್ಪನೆಗಳು ಮತ್ತು ಸಂಶೋಧನೆ ಜತೆಗೂಡಲಿವೆ. ಇದು ಕೈಗಾರಿಕಾ ಅಭಿವೃದ್ಧಿಯ ಹೆದ್ದಾರಿಯನ್ನು ಸೃಷ್ಟಿಸಲಿವೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಜಪಾನ್ ಕಂಪನಿಯೊ0ದು ಮಾಡಿರುವ ಬೃಹತ್ ಹೂಡಿಕೆ ಇದಾಗಿದೆ. ಇದರಿಂದ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಲಿವೆ. ಪರೋಕ್ಷವಾಗಿ ಸ್ಥಳೀಯರಿಗೂ ಲಾಭವಾಗಲಿದೆ. ರಾಜ್ಯ ಸರ್ಕಾರ ತನ್ನ ಹೊಸ ಕೈಗಾರಿಕಾ ನೀತಿಯಲ್ಲಿ ಬೆಂಗಳೂರನ್ನು ಹೊರತುಪಡಿಸಿ ಬೇರೆ ಭಾಗಗಳಲ್ಲಿ ಉದ್ಯಮ ಸ್ಥಾಪಿಸುವಂತೆ ಹಲವು ರಚನಾತ್ಮಕ ಕ್ರಮಗಳನ್ನು ಕೈಗೊಂಡಿದೆ ಎಂದರು.
ಕೇ0ದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ನಿಡೆಕ್ ಕಾರ್ಪೊರೇಷನ್ ಅಧ್ಯಕ್ಷ ಹಿರೋಶಿ ಕೊಬೆ, ಕಂಪನಿಯ ಎನರ್ಜಿ ವಿಭಾಗದ ಮುಖ್ಯಸ್ಥ ಮೈಕೆಲ್ ಬ್ರಿಗ್ಸ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಇತರರಿದ್ದರು.