farmer organizations Meeting  
ಧಾರವಾಡ

ಎಲ್ಲ ರೈತ ಸಂಘಟನೆಗಳ ಸಭೆ ನ. 21ರಂದು farmer organizations Meeting

ಕುಂದಗೋಳ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತ ವಿರೋಧಿ ನಿಲುವು ತಾಳಿವೆ. ತಾಲೂಕಿನ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಬೃಹತ್ ಹೋರಾಟ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನ. 21ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಕಲ್ಯಾಣಪುರದ ಶ್ರೀ ಬಸವಣ್ಣಜ್ಜನವರ ಮಠದಲ್ಲಿ ಎಲ್ಲ ರೈತ ಸಂಘಟನೆಗಳ ಸಭೆ farmer organizations Meeting  ನಡೆಸಿ, ಹೋರಾಟದ ಮುಂದಿನ ರೂಪುರೇಷೆ ತೀರ್ಮಾನಿಸಲಾಗುವುದು ಎಂದು ನವದೆಹಲಿಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷೆ ಮಾಣಿಕ್ಯಾ ಚಿಲ್ಲೂರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಈ ಬಾರಿ ಅತಿವೃಷ್ಟಿ ನಡುವೆಯೂ ಕಷ್ಟಪಟ್ಟು ರೈತರು ಗೋವಿನಜೋಳ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ದರ ಕುಸಿದಿದೆ. ಆದರೂ, ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸುತ್ತಿಲ್ಲ. ರಾಜ್ಯ-ಕೇಂದ್ರಗಳ ತಿಕ್ಕಾಟದ ನಡುವೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಬೆಳೆ ವಿಮೆ ಕಟ್ಟಿದರೂ ರೈತರಿಗೆ ಮಧ್ಯಂತರ, ಪೂರ್ಣ ವಿಮೆ ಪರಿಹಾರ ಸಿಕ್ಕಿಲ್ಲ. ಸೋಯಾಬೀನ್, ಉದ್ದು, ಹೆಸರು ಖರೀದಿ ಕೇಂದ್ರಗಳಲ್ಲಿ ಅಕ್ರಮ ನಡೆಯುತ್ತಿದೆ. ನೋಂದಣಿ ವೇಳೆ ಹಾಗೂ ಖರೀದಿ ವೇಳೆ ರೈತರು ದಾಖಲೆ ಪಡೆಯಲಾಗುತ್ತಿದೆ. ಎರಡೆರಡು ಬಾರಿ ದಾಖಲೆ ಪಡೆಯುವ ಮೂಲಕ ಡಬಲ್ ಎಂಟ್ರಿ ಮಾಫಿಯಾ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಪಂಚಗ್ರಹ ಹಿರೇಮಠದ ಶ್ರೀ ಶಿತಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣಪುರದ ಶ್ರೀ ಬಸವಣ್ಣಜ್ಜನವರು, ಶ್ರೀ ಶಿವಾನಂದ ಸ್ವಾಮೀಜಿ ಸಹಕಾರದೊಂದಿಗೆ ಸಂಪೂರ್ಣ ರಾಜಕೀಯ ಹೊರತಾಗಿ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ನ. 22ರ ಸಭೆಯಲ್ಲಿ ಪ್ರತಿಭಟನೆ ದಿನಾಂಕ ನಿಗದಿಪಡಿಸಲಾಗುವುದು. ಹೋರಾಟದ ದಿನದಂದು ಗಾಳಿಮರೆಮ್ಮ ದೇವಸ್ಥಾನ ಮತ್ತು ಮಠ ಪ್ರದೇಶದಿಂದ ತಹಸೀಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು ಎಂದರು.
ರೈತ ಮುಖಂಡರಾದ ಚಂದ್ರು ಕುರುಬರ, ಗುರುಪಾದಪ್ಪ ಬಂಕದ, ಈರಪ್ಪ ಚಿಲ್ಲೂರ, ಮೌನೇಶ ಕಟ್ಟಾಣಿ, ಗುಳಪ್ಪ ಕುಂಬಾರ, ರಾಜು ಹೊರಕೇರಿ, ನಿರ್ಮಲಾ ಹಣಸಿಯರ, ಶಂಕ್ರಮ ಸುತಾರ ಉಪಸ್ಥಿತರಿದ್ದರು.