ರೈತ (Meeting)ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗುರು ರಾಯನಗೌಡ್ರ, ಮಲ್ಲಣ್ಣ ಆಲೇಕರ್, ಬಸವರಾಜ ಗುಡಿ ಇದ್ದರು.
ಹುಬ್ಬಳ್ಳಿ: ಬಂಡೂರ (Meeting) ನಾಲಾದಿಂದ 2.18 ಟಿಎಂಸಿ ನೀರು ಪಡೆಯುವ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಪರವಾನಗಿ ಕುರಿತು ರ್ಚಚಿಸಲು ಡಿ. 11ರಂದು ಬೆಂಗಳೂರಿನ ಕೋರಮಂಗಲದಲ್ಲಿರುವ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ದಕ್ಷಿಣ ವಲಯ)ದ ಪ್ರಾದೇಶಿಕ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಭೆ ನಿಗದಿಯಾಗಿದೆ ಎಂದು ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ಪರವಾನಗಿಗೆ ವ್ಯತಿರಿಕ್ತವಾದ ನಿರ್ಣಯ ಕೈಗೊಂಡಲ್ಲಿ ಪ್ರಾದೇಶಿಕ ಕಚೇರಿ ಎದುರು ನೂರಾರು ರೈತರೊಂದಿಗೆ ಅನಿರ್ದಿಷ್ಟ ಅವಧಿಯ ಧರಣಿ ನಡೆಸಲು ಅಂದೇ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಡಿ. 1ರಂದು ದೆಹಲಿಯ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಕಚೇರಿ ಎದುರು ನಿರಂತರ ಧರಣಿ ನಡೆಸಲು ನಿರ್ಣಯಿಸಲಾಗಿತ್ತು. ಆದರೆ, ಹವಾಮಾನ ವೈಪರೀತ್ಯ ಹಾಗೂ ವಿಪರೀತ ಚಳಿಯಿಂದ ದೆಹಲಿ ಹೋರಾಟ ಕೈ ಬಿಟ್ಟು ಬೆಂಗಳೂರಿನ ಕೋರಮಂಗಲದಲ್ಲಿರುವ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಾದೇಶಿಕ ಕಚೇರಿ ಎದುರು ಡಿ. 2ರಿಂದ ಧರಣಿ ಸತ್ಯಾಗ್ರಹ ನಡೆಸಿದ್ದೇವು. ಆಗ, ಪ್ರಾದೇಶಿಕ ಕಚೇರಿಯ ಉಪ ಮಹಾ ನಿರೀಕ್ಷಕ (ಅರಣ್ಯ) ಪ್ರಣಿತ ಪಾಲ್ ಅವರು, ಬಂಡೂರ ನಾಲಾ ಕಾಮಗಾರಿಗೆ ಸಂಬಂಧಿಸಿದಂತೆ ಡಿ. 11ರಂದು ಸಭೆ ನಡೆಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಭೆಯಲ್ಲಿ ಅರಣ್ಯ ಮತ್ತು ಪರಿಸರ ಸಂಬಂಧಿ ಪರವಾನಗಿ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಭರವಸೆಯ ಹಿನ್ನೆಲೆಯಲ್ಲಿ ಅಂದಿನ ಧರಣಿಯನ್ನು ನಾವು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದೇವೆ. ಡಿ. 3ರಂದು ಪ್ರಾದೇಶಿಕ ಕಚೇರಿಗೆ ಪುನಃ ಪತ್ರ ಬರೆದು ಪರವಾನಗಿ ನೀಡುವ ಕುರಿತು ಮನವಿ ಮಾಡಿದ್ದೇವೆ ಹಾಗೂ ಪರವಾನಗಿ ಸಿಗುವವರೆಗೂ ಕಚೇರಿ ಎದುರು ಧರಣಿ ನಡೆಸಲು ಸಿದ್ಧರಿದ್ದೇವೆಂದು ತಿಳಿಸಲಾಗಿದೆ ಎಂದು ಹೇಳಿದರು.