ಧಾರವಾಡ: ದಿ. ಎಂ.ಡಿ. ಗೋಗೇರಿ ತಮ್ಮ ಹಾಸ್ಯದ ಮೂಲಕವೇ ಸಾಮಾಜಿಕ ಪ್ರಜ್ಞೆ ಹಾಗೂ ಹಾಸ್ಯ ಪ್ರಜ್ಞೆ ಬೆಳೆಸಿದ ಕನ್ನಡದ ಒಬ್ಬ ಶ್ರೇಷ್ಠ ಹಾಸ್ಯ ಕವಿಯಾಗಿದ್ದರು ಎಂದು ಅಂತಾರಾಷ್ಟ್ರೀಯ ಹಾಸ್ಯ ಕಲಾವಿದ, ಶಿಕ್ಷಕ ಮಹಾದೇವ ಸತ್ತಿಗೇರಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವುದಲ್ಲಿ ಎಂ.ಡಿ. ಗೋಗೇರಿ ದತ್ತಿ ಅಂಗವಾಗಿ ಗುರುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ `ಎಂ.ಡಿ. ಗೋಗೇರಿ ಕಾವ್ಯದಲ್ಲಿ ಹಾಸ್ಯ' ವಿಷಯ ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಾಸಬದ್ಧ ಪದಗಳುಳ್ಳ ಹಾಡುಗಳನ್ನು ರಚಿಸಿ, ಹಾಡಬಲ್ಲ ಓರ್ವ ಶಿಕ್ಷಕರಲ್ಲಿ ಎಂ.ಡಿ. ಗೋಗೇರಿ ಸಹ ಒಬ್ಬರು. ವಿದ್ಯಾರ್ಥಿಗಳಿಗೆ ನಾಟಕ ಹಾಗೂ ಪ್ರಹಸನದ ತರಬೇತಿ ನೀಡುತ್ತ ಮಕ್ಕಳಲ್ಲೂ ಭಾವೈಕ್ಯತೆಯ ಪ್ರಜ್ಞೆ ಮೂಡುವಂತೆ ಮಾಡಿದವರು. ಅವರ ರೆಡಿಯೋ ನಾಟಕಗಳೂ ಬಹಳ ಜನಮನ್ನಣೆ ಪಡೆದಿದ್ದವು. ಸಮಾಜದ ಅಂಕು-ಡೊoಕುಗಳನ್ನು ಎತ್ತಿ ತೋರಿಸಿ ಹಾಡಿನ ಮೂಲಕವೇ ಸಾಮರಸ್ಯ ಉಂಟು ಮಾಡಿದವರಾಗಿದ್ದರು. ಸುಶ್ರಾವ್ಯವಾಗಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಅವರು ಪಾಠ ಬೋಧನೆಯ ಸಂದರ್ಭದಲ್ಲಿಯೂ ನಾಟಕೀಯ ಪದ್ಧತಿಯ ಮೂಲಕ ಹಾವಭಾವದಿಂದ ಬೋಧನೆ ಮಾಡುತ್ತಿದ್ದರು ಎಂದರು.
ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ದಿ. ಎಂ.ಡಿ. ಗೋಗೇರಿ ಒಬ್ಬ ಅಪರೂಪದ ಶಿಕ್ಷಕರಾಗಿದ್ದವರು. ಅವರು ಯಾವುದೇ ಜಾತಿ-ಮತಕ್ಕೆ ಸೀಮಿತವಾಗದೇ ಸರ್ವಧರ್ಮಗಳನ್ನು ಸಮಭಾವದಿಂದ ಕಂಡ ಕವಿಗಳು. ಹಾಸ್ಯದ ಮೂಲಕವೇ ಸಾಮರಸ್ಯದ ಕೊಂಡಿಯಾಗಿ ಕೆಲಸ ಮಾಡಿದವರು. ಅವರ ಹಾಸ್ಯ ಪ್ರಜ್ಞೆ ಇಂದಿನ ಶಿಕ್ಷಕರಿಗಿಲ್ಲದಿರುವುದು ವಿಪರ್ಯಾಸ ಎಂದರು.
ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಚಂದ್ರಕಾoತ ಬೆಲ್ಲದ ಮಾತನಾಡಿದರು. ದತ್ತಿದಾನಿಗಳ ಪರವಾಗಿ ಉಪಸ್ಥಿತರಿದ್ದ ಎಸ್.ಆರ್. ಗೋಗೇರಿ ತಮ್ಮ ಮಾವನವರ ಸರಳ ಬದುಕು, ಕೌಟುಂಬಿಕ ಹಾಸ್ಯ ಪ್ರಸಂಗ ಕುರಿತು ಮಾತನಾಡಿದರು.
ಶಂಕರ ಕುಂಬಿ, ಶಿವಾನಂದ ಬಾವಿಕಟ್ಟಿ, ಚಿಕ್ಕಮಠ, ಶಂಭಯ್ಯ ಹಿರೇಮಠ, ಎಸ್.ಎಸ್. ಕಟ್ನೂರ, ಬಿ.ಕೆ. ಹೊಂಗಲ, ಎಫ್.ಬಿ. ಕಣವಿ, ಸುಮಂಗಲಾ ಕುಲಕರ್ಣಿ, ಸದಾಶಿವ ಜನಗೌಡರ, ನಾಗರಾಜ ಹಂಗಳಕಿ, ಪ್ರೇಮಾ ಹಿರೇಮಠ, ಕಲಾವತಿ ಹೂಗಾರ, ವಿದ್ಯಾ ದೇಸಾಯಿ, ಜಯಶ್ರೀ ಹುಲಬತ್ತಿ, ಕೆ.ಎಂ. ಅಂಗಡಿ ಹಾಗೂ ಗೋಗೇರಿ ಪರಿವಾರದವರು ಇದ್ದರು.
ತುಂಗಭದ್ರಾ ಮಹಿಳಾ ಮಂಡಳದ ಸದಸ್ಯರು ಪ್ರಾರ್ಥಿಸಿದರು. ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ನಿರ್ವಹಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.