mayor Phone inn ಹುಬ್ಬಳ್ಳಿಯಲ್ಲಿ ಮೇಯರ್​ ದುರ್ಗಮ್ಮ ಬೆಜವಾಡ ಅವರು ಫೋನ್ ​ಇನ್​ ಕಾರ್ಯಕ್ರಮ ನಡೆಸಿದರು. ಉಪಮೇಯರ್​ ರತ್ನಾಬಾಯಿ ನಾಜರೆ, ಅಧಿಕಾರಿಗಳು ಇದ್ದರು. 
ಧಾರವಾಡ

mayor Phone inn ನಾಗರಿಕರ ಸಮಸ್ಯೆ ಶೀಘ್ರ ಪರಿಹಾರದ ಭರವಸೆ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • ಫೋನ್ ಇನ್​ ಕಾರ್ಯಕ್ರಮದಲ್ಲಿ ಮೇಯರ್​ ಮಾತು
  • ಅಧಿಕಾರ ವಹಿಸಿಕೊಂಡ ನಂತರ ಮೊದಲ ಕಾರ್ಯಕ್ರಮ

ಹುಬ್ಬಳ್ಳಿ: mayor Phone inn

ನಾಗರಿಕರು ಹೇಳಿಕೊಂಡಿರುವ ಪ್ರತಿಯೊಂದು ಸಮಸ್ಯೆಗೂ ಅತ್ಯಂತ ಶೀಘ್ರದಲ್ಲಿ ಪರಿಹಾರ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮೇಯರ್​ ದುರ್ಗಮ್ಮ ಬೆಜವಾಡ ತಿಳಿಸಿದರು.

ಇಲ್ಲಿಯ ಮಹಾನಗರ ಪಾಲಿಕೆ ವತಿಯಿಂದ ಮೇಯರ್​ ಕಚೇರಿಯಲ್ಲಿ ಏರ್ಪಡಿಸಿದ್ದ ಮೇಯರ್​ ಜೊತೆ ಮಾತುಕತೆ ನೇರ ಫೋನ್​ ಇನ್​ ಕಾರ್ಯಕ್ರಮದ ನಂತರ ಅವರು ಮಾತನಾಡಿದರು.

ಬಹುತೇಕ ಸಮಸ್ಯೆಗಳು ಕುಡಿಯುವ ನೀರು, ಸ್ವಚ್ಚತೆ, ಗಟಾರು, ಬೀದಿದೀಪ, ಬೀದಿ ನಾಯಿ, ಬಿಡಾಡಿ ದನ, ಹಂದಿಗಳ ಹಾವಳಿ ಇವುಗಳ ಮೇಲೆ ಕೇಂದ್ರಿಕೃತವಾಗಿದ್ದವು.

ಧಾರವಾಡದಿಂದ ಕರೆ ಮಾಡಿದ್ದ ಒಬ್ಬರು ಕೆಲವು ವಾರ್ಡ್​ಗಳಿಗೆ ನಿರಂತರ ನೀರು ಪೂರೈಸಲಾಗುತ್ತಿದೆ. ಕೆಲವೆಡೆ ವಾರ ಕಳೆದರೂ ನೀರು ಬರುವುದಿಲ್ಲ. ಇದು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ ಎಂಬಂತಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ನಿರಂತರ ನೀರು ಬಂದ್​ ಮಾಡಿ ಅವಳಿನಗರದ ಎಲ್ಲ ವಾರ್ಡ್​ಗಳಿಗೆ ಮೂರು ದಿನಕ್ಕೊಮ್ಮೆ ನೀರು ಕೊಡಬಹುದು ಎಂದು ಸಲಹೆ ನೀಡಿದ್ದು ವಿಶೇಷವಾಗಿತ್ತು.

ಖಾಲಿ ಸೈಟ್​ಗಳಲ್ಲಿ ಕಸ ಚೆಲ್ಲಲಾಗುತ್ತಿದೆ. ಇದರಿಂದ ವಿಷಜಂತುಗಳ ಕಾಟ ಶುರುವಾಗಿದೆ. ಕಳ್ಳರ ಭಯವೂ ಇಲ್ಲಿದೆ.

ಹಳೇಹುಬ್ಬಳ್ಳಿ ಮಾರ್ಕೆಟ್​ ಬಳಿ ಕರ್ಮಷಿಯಲ್​ ಬಿಲ್ಡಿಂಗ್​ ಒಂದನ್ನು ಯಾವುದೇ ಪರವಾನಗಿ ಇಲ್ಲದೇ ಕಟ್ಟಲಾಗಿದೆ. ಸೆಟ್​ ಬ್ಯಾಕ್​ ಬಿಟ್ಟಿಲ್ಲ. ಜನವಸತಿ ಪ್ರದೇಶದಲ್ಲಿ ಒಬ್ಬರು ಆಡು, ನಾಯಿ ಸಾಕಿ ವಾತಾವರಣ ಕೆಡಿಸಿದ್ದಾರೆ. ಗೋಕುಲ ರಸ್ತೆ ಇಂಡಸ್ಟ್ರೀಯಲ್​ ಎಸ್ಟೇಟ್​ನಲ್ಲಿ ಕಸ ವಿಲೇವಾರಿ ಮಾಡುತ್ತಿಲ್ಲ. ಗೋಕುಲ ರಸ್ತೆ ಅಕ್ಕಪಕ್ಕದ ಬಡಾವಣೆಗಳಿಗೆ ರಾತ್ರಿ 12ಕ್ಕೆ ಕೊಡುತ್ತಾರೆ, ನಿದ್ದೆಗೆಟ್ಟು ನೀರು ಹಿಡಿಯುವುದಾದರೂ ಹೇಗೆ? ಎಂದು ಕರೆ ಮಾಡಿದ ಸಾರ್ವಜನಿಕರು ಪ್ರಶ್ನಿಸಿದರು.
ಹಳೇಹುಬ್ಬಳ್ಳಿ ಈಶ್ವರನಗರದಲ್ಲಿ ಸ್ವಚ್ಛತೆ ಇಲ್ಲದ್ದಕ್ಕೆ ಸೊಳ್ಳೆ ಕಾಟ ವಿಪರೀತವಾಗಿದೆ. ಮಂಟೂರ ರೋಡ್​ನಲ್ಲಿ ರಸ್ತೆ ದುರಸ್ತಿಯಾಗಿಲ್ಲ. ಬೈಕ್​ಗಳು ಸ್ಕಿಡ್​ ಆಗಿ ಬೀಳುತ್ತಿವೆ. ನಾಯಿ ಹಾವಳಿಯೂ ವಿಪರೀತವಾಗಿದೆ. ಉಣಕಲ್ಲ ಸಾಯಿನಗರದಲ್ಲಿ ಗಟಾರ್​ ಕಾಮಗಾರಿ ಅರ್ಧಂರ್ಬಧ ಆಗಿದ್ದು, ಜನರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದವು.

ತಕ್ಷಣ ಪರಿಹಾರವಾಗಬೇಕು

ಒಂದು ತಾಸು ಫೋನ್​ ಇನ್​ ಕಾರ್ಯಕ್ರಮದಲ್ಲಿ ಮೇಯರ್​ ಅವರು 30 ಕರೆಗಳನ್ನು ಸ್ವೀಕರಿಸಿದರು. ಇದರಲ್ಲಿ 46 ದೂರುಗಳನ್ನು ಜನರು ಹೇಳಿಕೊಂಡರು. ಇದರಲ್ಲಿ ತಕ್ಷಣ ಪರಿಹರಿಸಬಹುದಾದ ಎ ಕೆಟಗರಿಯ 26 ಸಮಸ್ಯೆಗಳಿದ್ದು, ಅವುಗಳನ್ನು ಶ್ರೀ ಪರಿಹರಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್​ ದುರ್ಗಮ್ಮ ಬೆಜವಾಡ ಅವರು, ಕರೆ ಮಾಡಿದ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ತಾವು ಕೂಡ ಸ್ಥಳ ಪರಿಶೀಲನೆ ಮಾಡಿ ಪರಿಹಾರ ಸಿಕ್ಕಿರುವ ಬಗ್ಗೆ ಖಚಿತ ಪಡಿಸಿಕೊಳ್ಳಲಿದ್ದೇನೆ. ವಿಶ್ವಾಸವಿಟ್ಟು ಜನರು ಕರೆ ಮಾಡುತ್ತಾರೆ. ಅವರಿಗೆ ನಿರಾಸೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.