ಹುಬ್ಬಳ್ಳಿ: ಸಮಾಜ ನನಗೇನು ಕೊಟ್ಟಿದೆ ಎಂದು ಪ್ರಶ್ನಿಸುವುದಕ್ಕಿಂತ, ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ನಾನೇನು ಕೊಡುಗೆ ನೀಡಬಲ್ಲೆ ಎಂಬ ಆತ್ಮಾವಲೋಕನ ಪ್ರತಿಯೊಬ್ಬ ಯುವಕನಲ್ಲೂ ಮೂಡಬೇಕು ಎಂದು ಕೆ.ಇ. ಬೋರ್ಡ್ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎಸ್.ಎ. ಗಾಣಿಗೇರ ಹೇಳಿದರು.
ಕಲಘಟಗಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಧಾರವಾಡ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ಎನ್ಎಸ್ಎಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ಕಾಯಕ, ಸಹೋದರತ್ವ, ರಾಷ್ಟ್ರಪ್ರೇಮ, ಸಮಾಜಸೇವೆ, ಸಂಸ್ಕಾರ ಮತ್ತು ಸದ್ವಿಚಾರಗಳನ್ನು ಯುವಜನತೆಯಲ್ಲಿ ಬೆಳೆಸಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಶ್ರೇಷ್ಠ ವೇದಿಕೆಯೇ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಎಂದು ಅಭಿಪ್ರಾಯಪಟ್ಟರು.
ಯುವಜನತೆ ಟ್ರೆಂಡ್ಗಳ ಹಿಂದೆ ಓಡುವ ಬದಲು ಭಾರತೀಯ ಶ್ರೇಷ್ಠ ಸಂಸ್ಕೃತಿ ಮತ್ತು ಪರಂಪರೆಯನ್ನು ಅಳವಡಿಸಿಕೊಳ್ಳಬೇಕು. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯನ್ನು ಬಿಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಎನ್.ಎಂ. ಸಂಗಮನವರ ಮಾತನಾಡಿದರು.
ಐಕ್ಯೂಎಸಿ ಸಂಯೋಜಕರಾದ ಡಾ. ಸಂತೋಷ ಮನ್ನೋಪಂತರ್, ಪ್ರೊ. ಕೆ.ಎಸ್. ಪಾಟೀಲ್, ಡಾ. ಸಲೇಹಾ ಬೆಳಗಾಂವ, ಕಲಘಟಗಿ ತಾಲೂಕು ಸಂಗ್ರಾಮ ಸೇನೆಯ ಅಧ್ಯಕ್ಷ ಸಾತಪ್ಪ ಕುಂಕೂರ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರಭುಲಿಂಗ ರಂಗಾಪುರ, ಪೂಜಾ ಅರಳಿಮರದ, ಅನಿತಾ ಕೌಲಗೇರಿ, ಲಕ್ಷ್ಮೀ ಕೋಣಿ, ಕಾದಂಬರಿ ಗಾವಡೆನವರ ಉಪಸ್ಥಿತರಿದ್ದರು.
ಕಾಲೇಜಿನ ಬೋಧಕ -ಬೋಧಕೇತರ ಸಿಬ್ಬಂದಿ, ಸ್ವಯಂಸೇವಕರು ಇದ್ದರು. ಕಾಶವ್ವ ಶಿಂಧೆ ಹಾಗೂ ಸಂಗಡಿಗರು ಎನ್ಎಸ್ಎಸ್ ಗೀತೆ ಹಾಡಿದರು. ಸವಿತಾ, ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಕೊಪ್ಪದ ವಂದಿಸಿದರು.