Incomex ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು.
- ಪೂರ್ವಭಾವಿ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅಶಯ.
ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಇನ್ಕಾಮೆಕ್ಸ್ ಪೂರ್ವಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.
ಏ. 25 ರಿಂದ 29ರವರೆಗೆ ನಡೆಯಲಿರುವ ಇನ್ಕಾಮೆಕ್ಸ್-2026 ಯಶಸ್ಸಿಗೆ ಎಲ್ಲ ಜನಪ್ರತಿನಿಧಿಗಳು, ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ಸೇರಿ ಒಂದು ತಂಡವಾಗಿ ಕೆಲಸ ಮಾಡೋಣ.
ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಬಿಸಿಲು ಹೆಚ್ಚು ಇರುವುದರಿಂದ ಕುಡಿಯುವ ನೀರಿಗೆ ಕೊರತೆ ಆಗಬಾರದು.
ಸಾಧ್ಯವಾದರೆ ಪೈಪ್ಲೈನ್ ಅಳವಡಿಸಬೇಕು ಎಂದು ಎಲ್ ಆಂಡ್ ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೋಟಗಾರಿಕೆ ಇಲಾಖೆಯವರು ಸುಂದರ ಸಸಿಗಳಿರುವ 500ಕ್ಕೂ ಹೆಚ್ಚು ಹೂವಿನ ಕುಂಡಗಳನ್ನು ಇಡಬೇಕು.
ಬಿಆರ್ಟಿಎಸ್ ಹೆಚ್ಚು ಬಸ್ ಸಂಚಾರಗಳನ್ನು ಆರಂಭಿಸಬೇಕು ಹಾಗೂ ಇನ್ಕಾಮೆಕ್ಸ್ ನಡೆಯಲಿರುವ ಅಮರಗೋಳ ಎಪಿಎಂಸಿ ಯಾರ್ಡ್ನ ಹುಬ್ಬಳ್ಳಿ-ಧಾರವಾಡ ಮಲ್ಟಿಪರಪೋಸ್ ಸೆಂಟರ್ ಬಳಿ ಎಲ್ಲ ಬಸ್ಗಳಿಗೆ ತಾತ್ಕಾಲಿಕ ನಿಲುಗಡೆ ಸೌಲಭ್ಯ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.
ಎಪಿಎಂಸಿ ಯಾರ್ಡ್ ಬಳಿಯ ಡಬ್ಬಿ ಅಂಗಡಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಇನ್ಕಾಮೆಕ್ಸ್ ಮುಗಿದ ನಂತರ ಡಬ್ಬಿ ಅಂಗಡಿ ಮಾಲೀಕರಿಗೆ ಮರಳಿ ವ್ಯಾಪಾರ ಆರಂಭಿಸಲು ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.
ಇನ್ಕಾಮೆಕ್ಸ್ಗೆ ನಿರಂತರ ವಿದ್ಯುತ್ ಪೂರೈಕೆಯಾಗಬೇಕು. ಸಮರ್ಪಕ ವಾಹನ ದಟ್ಟಣೆ ನಿರ್ವಹಣೆ ಮಾಡಲು ಪೊಲೀಸ್ ಇಲಾಖೆ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಕಾರ್ಯದರ್ಶಿ ಉದಯ ರೇವಣಕರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಪಿಯುಷ್ ಗೋಯಲ್, ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರದ ಸಚಿವರಾದ ಎಂ.ಬಿ. ಪಾಟೀಲ, ಸಂತೋಷ ಲಾಡ್ ಸೇರಿದಂತೆ ಇನ್ಕಾಮೆಕ್ಸ್ಗೆ ಆಗಮಿಸಲಿರುವ ಇತರ ಅತಿಥಿಗಳು ಹಾಗೂ ಭಾಗವಹಿಸಲಿರುವ ವಿವಿಧ ಉದ್ಯಮಗಳ ಕುರಿತು ವಿವರ ನೀಡಿದರು.
ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ್, ವಿಜಯ ಜವಳಿ, ಜಯಪ್ರಕಾಶ ಟೆಂಗಿನಕಾಯಿ, ವೀರಣ್ಣ ಕಲ್ಲೂರ, ಶಶಿಧರ ಶೆಟ್ಟರ, ಇತರರು ಇದ್ದರು.