ಉಪ್ಪಿನಬೆಟಗೇರಿ: ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ (Marewada) ಜಾತ್ರೆಯಾಗಿರುವ ಮರೇವಾಡ ಗ್ರಾಮದ ಬಸವಣ್ಣ (ನಂದೀಶ್ವರ) ದೇವರ ಜಾತ್ರಾ ಮಹೋತ್ಸವ ಮೇ 1ರಂದು ವಿಜೃಂಭಣೆಯಿಂದ ಜರುಗಲಿದೆ.
ಏ. 30ರಂದು ಸಂಜೆ 4.30ಕ್ಕೆ ಬಂಡಿ ಉತ್ಸವ ಏರ್ಪಾಟಾಗಿದೆ. ವಿವಿಧ ಭಜನಾ ತಂಡಗಳಿಂದ ಅಹೋರಾತ್ರಿ ಶಿವನಾಮಸ್ಮರಣೆ, ಭಜನಾ ಕಾರ್ಯಕ್ರಮ ಜರುಗಲಿದೆ. ಮೇ 1ರಂದು ಬೆಳಗ್ಗೆ ಬಸವಣ್ಣ ದೇವರ ಶಿಲಾ ವಿಗ್ರಹಕ್ಕೆ ಏಕಾದಶಿ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಮತ್ತು ಪುಷ್ಪಾಲಂಕಾರದ ಪೂಜೆಯನ್ನು ಅರ್ಚಕರಾದ ಶೇಖರಯ್ಯ ಹಿರೇಮಠ ಹಾಗೂ ಅಂಕಲಯ್ಯ ಯರಗಂಬಳಿಮಠ ನೆರವೇರಿಸಲಿದ್ದಾರೆ.
ದಾಸೋಹ ಸೇವೆಯನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಅಭಿನವ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸುವರು. ಮೇ 1ರಂದು ಸಂಜೆ 4.30ಕ್ಕೆ ರಥೋತ್ಸವ ವೈಭವದಿಂದ ನಡೆಯಲಿದೆ. ರಥೋತ್ಸವದ ಕೊನೆಯಲ್ಲಿ ಅಮ್ಮಿನಬಾವಿ ಬಸವಣ್ಣ(ನಂದೀಶ್ವರ) ದೇವರ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ರಥದಲ್ಲಿ ಕುಳಿತು ಕಾರ್ಣಿಕ ಹೇಳುವರು. ರಾತ್ರಿ 10ಗಂಟೆಗೆ ಮರೇವಾಡ ಗ್ರಾಮದ ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮಗಳು ಏರ್ಪಾಟಾಗಿವೆ ಎಂದು ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.