ಧಾರವಾಡ: ನಕಲಿ ಅಂಕಪಟ್ಟಿ ಸೃಷ್ಟಿಸಿ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗ ಹುದ್ದೆಗೆ ಆಯ್ಕೆಯಾಗಿದ್ದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವೀರಾಪೂರ ಗ್ರಾಮದ ಶ್ರೀಮಂದ್ರ ವಸಂತ ವರೂರ ಹಾಗೂ ಅಪರಾಧಿಗೆ ಸಹಾಯ ಮಾಡಿದ್ದ ಬಾಳಂಬಿಡ ನಿವಾಸಿ ನಾರಾಯಣ ಬಸಪ್ಪ ಕರೆನ್ನವರ ಎಂಬುವವರಿಗೆ ಇಲ್ಲಿನ ಪ್ರಧಾನ ಮತ್ತು ಜೆಎಂಎಫ್ ಸಿ ನ್ಯಾಯಾಲಯ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ಪ್ರಕಟಿಸಿದೆ.
ಕಂದಾಯ ಇಲಾಖೆಯಲ್ಲಿ ಖಾಲಿ ಇದ್ದ ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಮೇಲೆ ಅರ್ಜಿ ಆಹ್ವಾನಿಸಲಾಗಿತ್ತು. ಅಪರಾಧಿ ಶ್ರೀಮಂದ ವರೂರ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆಸಲಾದ ಪರೀಕ್ಷೆಯಲ್ಲಿ ನೈಜವಾಗಿ 301 ಅಂಕ ಪಡೆದಿದ್ದರೂ ಗ್ರಾಮ ಲೆಕ್ಕಿಗ ಹುದ್ದೆಗೆ ನೇಮಕವಾಗುವ ಉದ್ದೇಶದಿಂದ ನಾರಾಯಣ ಕರೆನ್ನವರ ಸಹಾಯದಿಂದ 529 ಅಂಕ ಪಡೆದು ಉತೀರ್ಣರಾಗಿರುವಂತೆ ನಕಲಿ ಅಂಕಪಟ್ಟಿ ಸೃಷ್ಟಿಸಿ ನೇಮಕಾತಿ ಪ್ರಾಧಿಕಾರದ ಮುಂದೆ ಹಾಜರ ಪಡಿಸಿ, ಆಯ್ಕೆಯಾಗಿ, ಸರ್ಕಾರಕ್ಕೆ ಮೋಸ ಮಾಡಿದ್ದ.
ಈ ಕುರಿತು ಜಿಲ್ಲಾಧಿಕಾರಿ ಧಾರವಾಡ ಉಪ ನಗರ ಪೊಲೀಸ್ ಠಾಣೆಯಲ್ಲಿ 2014 ರಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಕುರಿತು ಅಂದಿನ ತನಿಖಾಧಿಕಾರಿ ಆರ್.ಡಿ. ನಿಲ್ಲಣ್ಣವರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು.
ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾದೀಶ ಅವಿನಾಶ ಘಾಳಿ ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರ ಅಭಿಯೋಜಕ ವೈ.ಜೆ. ಸಣ್ಣಬಸಣ್ಣವರ ವಾದ ಮಂಡಿಸಿದರು.