Jaggalagi ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಗ್ಗಲಗಿ ಹಬ್ಬದ ಆಯೋಜಕರಾದ ಶಾಸಕ ಮಹೇಶ ಟೆಂಗಿನಕಾಯಿ.
- ಮಾ. 5ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ 400 ಜಗ್ಗಲಗಿ, 60 ತಂಡ, ಸಾವಿರ ಕಲಾವಿದರು ಭಾಗಿ
- ಒಂದು ಸಾವಿರ ಕಲಾವಿದರು ಭಾಗವಹಿಸುವರು.
- ಜಗ್ಗಲಗಿ ಹಬ್ಬ ದೇಸೀಯ ಸಂಸ್ಕೃತಿ ಬಿಂಬಿಸುವ ಹಬ್ಬ.
ಈ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಗ್ಗಲಗಿ ಹಬ್ಬದ ಆಯೋಜಕರಾದ ಶಾಸಕ ಮಹೇಶ ಟೆಂಗಿನಕಾಯಿ, ಅಂದು ಸಂಜೆ 4 ಗಂಟೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿ ಜಗ್ಗಲಗಿ ಹಬ್ಬವನ್ನು ಉದ್ಘಾಟಿಸುವರು. ಧಾರವಾಡ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಉತ್ತರ ಕರ್ನಾಟಕದ 25 ಜನ ಸ್ವಾಮೀಜಿಯವರನ್ನು ಆಹ್ವಾನಿಸಲಾಗಿದೆ ಎಂದರು.
ಕೋವಿಡ್ ಹಾಗೂ ಶಾಸಕ ಸಿ.ಎಸ್. ಶಿವಳ್ಳಿ ನಿಧನರಾದ ಎರಡು ವರ್ಷಗಳನ್ನು ಹೊರತುಪಡಿಸಿ, ಕಳೆದ 14 ವರ್ಷಗಳಿಂದ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಆಯೋಜಿಸಲಾಗುತ್ತಿದ್ದು, ಈ ಬಾರಿಯದ್ದು 15ನೇ ವರ್ಷದ ಹಬ್ಬವಾಗಿದೆ.
ಹೋಳಿ ಹಬ್ಬದ ರಂಗು ಮರುಸ್ಥಾಪಿಸಲು ಹಾಗೂ ಹಿಂದೂಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಹಬ್ಬ ಆಯೋಜಿಸಲಾಗಿತ್ತು. ಇದೀಗ, ರಾಜ್ಯಾದ್ಯಂತ ಇದು ಹೆಸರುವಾಸಿಯಾಗಿದೆ. ಕಳೆದ ವರ್ಷ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಈ ಹಬ್ಬ ವೀಕ್ಷಿಸಲು ಜನರು ಬಂದಿದ್ದರು ಎಂದು ತಿಳಿಸಿದರು.
ಈ ವರ್ಷ 60ಕ್ಕೂ ಹೆಚ್ಚು ತಂಡಗಳ 400 ಜಗ್ಗಲಗಿ ಹಾಗೂ ಸುಮಾರು ಒಂದು ಸಾವಿರ ಕಲಾವಿದರು ಭಾಗವಹಿಸುವರು. ಮಹಾರಾಷ್ಟ್ರದ ಇಚಲಕರಂಜಿಯ ತಂಡ ಇದೇ ಮೊದಲ ಬಾರಿಗೆ ಭಾಗವಹಿಸಲಿದ್ದು, 30 ಜನ ಪುರುಷರು ಹಾಗೂ 20 ಜನ ಮಹಿಳಾ ಕಲಾವಿದರು ತಂಡದಲ್ಲಿ ಇದ್ದಾರೆ ಎಂದರು.
ಉಡುಪಿಯ ಕಾಡು ಕುಣಿತ ತಂಡ, ಗಂಗಾವತಿಯ ನಾಸಿಕ್ ಡೋಲ್ ಸಹ ಭಾಗವಹಿಸಲಿದೆ. ಪ್ರತಿ ವರ್ಷ ವಿವಿಧ ಪ್ರದೇಶಗಳಲ್ಲಿ ಜಗ್ಗಲಗಿ ಹಬ್ಬದ ಮೆರವಣಿಗೆ ನಡೆಯುತ್ತದೆ.
ಈ ಬಾರಿ ಮೂರುಸಾವಿರ ಮಠದಿಂದ ಆರಂಭಗೊಳ್ಳುವ ಮೆರವಣಿಗೆ ಎಸ್.ಟಿ. ಭಂಡಾರಿ ರಸ್ತೆ, ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ಬಾನಿ ಓಣಿ, ಶಕ್ತಿ ರಸ್ತೆ, ಸ್ಟೇಶನ್ ರಸ್ತೆ, ಬ್ರಾಡ್ ವೆ, ದುರ್ಗದ ಬೈಲ್ ವೃತ್ತ, ತುಳಜಾಭವಾನಿ ವೃತ್ತದ ಮುಖಾಂತರ ಮೂರುಸಾವಿರ ಮಠದಲ್ಲಿ ಅಂತ್ಯಗೊಳ್ಳಲಿದೆ. ರಾತ್ರಿ 10 ಗಂಟೆಯವರೆಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಜಗ್ಗಲಗಿ ಹಬ್ಬದಲ್ಲಿ ಸುಳ್ಳ, ಬ್ಯಾಹಟ್ಟಿ, ಛಬ್ಬಿ, ಸೂರಶೆಟ್ಟಿಕೊಪ್ಪ, ಧಾರವಾಡ, ಅರಳಿಕಟ್ಟಿ, ಅಮರಗೋಳ, ತಾರಿಹಾಳ, ಶಿವಳ್ಳಿ, ಕಲಘಟಗಿ, ಗುಂಡೇನಕಟ್ಟಿ, ಮರೆವಾಡ, ಬೊಮ್ಮಸಮುದ್ರ, ಅಮ್ಮಿನಬಾವಿ, ಸೋಮನಕೊಪ್ಪ, ಗಂಗಾವಗಿ, ಕಣವಿಹೊನ್ನಾಪುರ, ಹಂಚಿನಾಳ ಗ್ರಾಮಗಳ ಜಾನಪದ ಕಲಾವಿದರು ಭಾಗವಹಿಸುವರು ಎಂದು ತಿಳಿಸಿದರು.
ಜಗ್ಗಲಗಿ ಹಬ್ಬ ದೇಸೀಯ ಸಂಸ್ಕೃತಿ ಬಿಂಬಿಸುವ ಹಬ್ಬವಾಗಿದ್ದು, ಡಿಜೆ ಬಳಕೆ ಮಾಡುವುದಿಲ್ಲ. ಈ ಹಬ್ಬವನ್ನು ಮುಂದಿನ ಪೀಳಿಗೆಗೂ ಬೆಳೆಸಬೇಕು. ಹಾಗಾಗಿ, ಪಾಲಕರು ತಮ್ಮ ಮಕ್ಕಳೊಂದಿಗೆ ಆಗಮಿಸುವಂತೆ ಶಾಸಕ ಮಹೇಶ ಟೆಂಗಿನಕಾಯಿ ಮನವಿ ಮಾಡಿದರು.
ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಂಜುನಾಥ ಕಾಟ್ಕರ, ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.