madiwal machidev ಹುಬ್ಬಳ್ಳಿಯ ಮಡಿವಾಳನಗರದಲ್ಲಿ ಏರ್ಪಡಿಸಿದ್ದ ಮಾಚಿದೇವರ ದೇವಸ್ಥಾನದ ವಾರ್ಷಿಕೋತ್ಸವ ಉದ್ಘಾಟನೆಯಲ್ಲಿ ಡಾ. ಬಸವ ಮಾಚಿದೇವ ಸ್ವಾಮೀಜಿ, ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ರಘು ಕೌಟಿಲ್ಯ, ಪ್ರಕಾಶ ಪಾಟೀಲ, ರಮೇಶ ಮಹಾದೇವಪ್ಪನವರ, ಗಣೇಶ ಮಡಿವಾಳರ, ಸಂದೀಪ ಹುಣಚಿ, ಸತೀಶ ಕೌತಾಳ, ಇತರರು ಇದ್ದರು.
- ಡಾ. ಬಸವ ಮಾಚಿದೇವ ಸ್ವಾಮೀಜಿ ಸಲಹೆ
- ಮಡಿವಾಳ ಮಾಚಿದೇವರ ದೇವಸ್ಥಾನ ವಾರ್ಷಿಕೋತ್ಸವ
ಹುಬ್ಬಳ್ಳಿ: madiwal machidev ಶ್ರಮಜೀವಿಗಳಾಗಿರುವ ಮಡಿವಾಳರು ತಮ್ಮ ಮುಂದಿನ ಪೀಳಿಗೆಗೆ ಉನ್ನತ ಶಿಕ್ಷಣ ಒದಗಿಸಿ ಸಮಾಜದಲ್ಲಿ ಅತ್ಯುತ್ತಮ ಸ್ಥಾನಮಾನಗಳನ್ನು ಗಳಿಸಲು ಪ್ರೇರಣೆ ನೀಡಬೇಕೆಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ಡಾ. ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.
ಇಲ್ಲಿಯ ಮಡಿವಾಳ ನಗರದಲ್ಲಿ ಮಡಿವಾಳ ಮಾಚಿದೇವರ ದೇವಸ್ಥಾನ ಸಮಿತಿ, ಹುಬ್ಬಳ್ಳಿ ಮಡಿವಾಳ ಕೋ ಆಪ್ ಕ್ರೆಡಿಟ್ ಸೊಸೈಟಿ ಆಶ್ರಯದಲ್ಲಿ ಏರ್ಪಡಿಸಿದ್ದ ದೇವಸ್ಥಾನದ 9ನೇ ಹಾಗೂ ಸೊಸೈಟಿಯ 79ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಡಿವಾಳ ಸಮಾಜವು ಕಾಯಕವನ್ನು ನಂಬಿ ಬದುಕುತ್ತಿದೆ. ಬಿಸಿಲು, ಮಳೆ, ಚಳಿ ಎನ್ನದೇ ದುಡಿಯುವ ಶ್ರಮಜೀವಿಗಳು. ಹಿಂದಿನನವರು ಅನುಭವಿಸಿದ್ದ ಕಷ್ಟವನ್ನು ಮುಂದಿನವರು ಅನುಭವಿಸಬಾರದು. ಎಷ್ಟೇ ಸವಾಲುಗಳಿದ್ದರೂ ಮಕ್ಕಳು ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಪಾರಂಪರಿಕ ಕಾಯಕಕ್ಕೆ ಸೀಮಿತವಾಗಬಾರದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಮಾತನಾಡಿ, ಹಿಂದುಳಿದ ಹಾಗೂ ಸಾಮಾಜಿಕ ನ್ಯಾಯದಿಂದ ವಂಚಿತವಾದ ಸಮುದಾಯಗಳ ಹಕ್ಕುಗಳಿಗಾಗಿ ಧ್ವನಿ ಎತ್ತುವ ಕಾರ್ಯವಾಗಬೇಕು. ಸಮಾಜ ಬಾಂಧವರು ದೌರ್ಜನ್ಯಕ್ಕೊಳಗಾದ ಸಂದರ್ಭದಲ್ಲಿ ದೂರು ನೀಡಲು ಜನರು ಭಯಪಡುವ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ಜನರ ರಕ್ಷಣೆಗೆ ತಾವು ಸದಾ ಸಿದ್ಧ ಎಂದು ಹೇಳಿದರು.
ಹಿಂದುಳಿದ ಸಮುದಾಯಗಳ ಸಂಘಟನೆಗಳು ಕೇವಲ ಜಯಂತಿ ಆಚರಣೆ ಹಾಗೂ ಸಮುದಾಯ ಭವನ, ದೇವಸ್ಥಾನ ನಿರ್ಮಾಣದಂತಹ ಬೇಡಿಕೆಗಳಿಗೆ ಸೀಮಿತವಾಗಬಾರದು. ತಮ್ಮ ಮಕ್ಕಳ ಶಿಕ್ಷಣ, ಉದ್ಯೋಗಗಳ ಬಗ್ಗೆ ಆಲೋಚನೆ ಮಾಡಬೇಕು. ಬದುಕು ಕಟ್ಟಿಕೊಳ್ಳಲು ಜಮೀನು ತೆಗೆದುಕೊಳ್ಳಬೇಕು, ದೌರ್ಜನ್ಯ ನಡೆದಾಗ ರಕ್ಷಣೆಗೆ ಬರುವಂತೆ ಸರ್ಕಾರಕ್ಕೆ ಕೋರಬೇಕು, ನೈಜ ಸಮಸ್ಯೆಗಳ ಕುರಿತು ವ್ಯವಸ್ಥಿತವಾಗಿ ಹೋರಾಟ ನಡೆಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಮಡಿವಾಳ ಮಾಚಿದೇವರು ಕೇವಲ ಬಟ್ಟೆ ತೊಳೆಯುವ ಕಾಯಕ ಮಾಡಲಿಲ್ಲ. ಭಕ್ತರ ಮನಸ್ಸಿನಲ್ಲಿದ್ದ ಕೊಳೆಯನ್ನೂ ಸಹ ತೊಡೆದು ಹಾಕಿ, ಧರ್ಮಕ್ಕೆ ಕುಂದು ಬಂದಾಗ ಹೋರಾಡಿದ ಶ್ರೇಷ್ಠ ಶಿವಶರಣರಾಗಿದ್ದಾರೆ. ವಚನ ಸಾಹಿತ್ಯ ಹಾಗೂ ಶರಣರ ತತ್ವ ಸಿದ್ಧಾಂತಗಳ ಸಂರಕ್ಷಣೆಯಲ್ಲಿ ಮಾಚಿದೇವರ ಪಾತ್ರ ಮಹತ್ವದ್ದಾಗಿದೆ ಎಂದರು.
ಬಳಿಕ ಮಾಚಿದೇವರ ದೇವಸ್ಥಾನದಲ್ಲಿ ಗಣಹೋಮ, ಮೃತ್ಯುಂಜಯ ಶಾಂತಿ. ಹವನ, ನವಗ್ರಹ ಶಾಂತಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಉದ್ಯಮಿ ಪ್ರಕಾಶ ಪಾಟೀಲ, ಜೆಡಿಎಸ್ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಸಮಾಜ ಸೇವಕ ರಮೇಶ ಮಹಾದೇವಪ್ಪನವರ, ಗಣೇಶ ಮಡಿವಾಳರ, ಸಮಿತಿ ಅಧ್ಯಕ್ಷ ಸಂದೀಪ ಹುಣಚಿ, ಕಾರ್ಯಾಧ್ಯಕ್ಷ ಸತೀಶ ಕೌತಾಳ, ನವೀನ ಮಡಿವಾಳರ, ಇತರರು ಉಪಸ್ಥಿತರಿದ್ದರು.