ಹುಬ್ಬಳ್ಳಿ-ಧಾರವಾಡ (Luck to ladies) ಮಹಾನಗರ ಪಾಲಿಕೆ 
ಧಾರವಾಡ

ಕೊನೆಯ ಅವಧಿ (Luck to ladies) ಮಹಿಳೆಯರ ಕೈಗೆ

ಸಂತೋಷ ವೈದ್ಯ
ಸಂತೋಷ ವೈದ್ಯ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ(Luck to ladies) ಹಾಲಿ ಮೇಯರ್-ಉಪ ಮೇಯರ್ ಅಧಿಕಾರವಧಿ ಜೂನ್ 29ಕ್ಕೆ ಕೊನೆಗೊಳ್ಳಲಿದೆ. ಇದರೊಂದಿಗೆ ಅಖಂಡ ಹು-ಧಾ ಮಹಾನಗರ ಪಾಲಿಕೆಯ ಕೊನೆಯ ಅವಧಿಯ ನೂತನ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನಗಣನೆ ಆರಂಭವಾಗಲಿದೆ. ಕೊನೆಯ ಅವಧಿಗೆ ಮೇಯರ್- ಉಪ ಮೇಯರ್ ಎರಡೂ ಸ್ಥಾನ ಮಹಿಳೆಯರ ಪಾಲಾಗುತ್ತಿರುವುದು ವಿಶೇಷ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಂಬ ರಚನೆಯ ಅಸ್ತಿತ್ವವು ಇತಿಹಾಸ ಪುಟ ಸೇರುವುದು ಸನ್ನಿಹಿತವಾಗಿದೆ. 2027ರಲ್ಲಿ ಅಥವಾ ಬಳಿಕ ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಯಾಗಲಿದೆ. ಆಗ, ಹುಬ್ಬಳ್ಳಿಗೆ ಮತ್ತು ಧಾರವಾಡಕ್ಕೆ ಪ್ರತ್ಯೇಕವಾಗಿ ಮೇಯರ್ ಮತ್ತು ಉಪ ಮೇಯರ್ ಬರಲಿದ್ದಾರೆ.
ಈಗ ಹು-ಧಾ ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹಾಗಾಗಿ ಕೊನೆಯ ಅವಧಿಯಲ್ಲಿ ಮಹಿಳೆಯರೇ ಆಡಳಿತ ನಡೆಸಲಿದ್ದಾರೆ. ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ.
ಮೇಯರ್ ಸ್ಥಾನಕ್ಕೆ ಚಂದ್ರಿಕಾ ಮೇಸ್ತ್ರಿ ಹಾಗೂ ದುರ್ಗಮ್ಮ ಬಿಜವಾಡ ನಡುವೆ ಪೈಪೋಟಿ ಇದೆ. ಉಪ ಮೇಯರ್ ಸ್ಥಾನದ ರೇಸ್​ನಲ್ಲಿ ಅನೀತಾ ಚಳಗೇರಿ, ರತ್ನಾಬಾಯಿ ನಾಜರೆ, ಚಂದ್ರಕಲಾ ಕೊಟಬಾಗಿ ಹಾಗೂ ಸುನೀತಾ ಮಾಳವದಕರ ಇದ್ದಾರೆ. ದುರ್ಗಮ್ಮ ಬಿಜವಾಡ ಹಿಂದೆ ಉಪ ಮೇಯರ್ ಆಗಿದ್ದರು. ಈ ಕಾರಣಕ್ಕೆ ಮೇಯರ್ ಸ್ಥಾನದ ಪೈಪೋಟಿಯಲ್ಲಿ ಚಂದ್ರಿಕಾ ಮೇಸ್ತ್ರಿ ಮುಂಚೂಣಿಯಲ್ಲಿ ಪರಿಗಣಿಸಲ್ಪಡುತ್ತಾರೆ.
ಮೇಯರ್-ಉಪ ಮೇಯರ್ ಅಭ್ಯರ್ಥಿಗಳ ಆಯ್ಕೆಯು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರವಾಗುತ್ತದೆ. ಆಯ್ಕೆ ಚುನಾವಣೆಯ ಹಿಂದಿನ ದಿನ ಕೋರ್ ಕಮಿಟಿ ಸಭೆ ನಡೆಯುತ್ತದೆ. ಮೇಯರ್-ಉಪ ಮೇಯರ್ ಸ್ಥಾನವನ್ನು ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡುವುದು ಬಿಜೆಪಿಯ ಆಂತರಿಕ ಲೆಕ್ಕಾಚಾರ. ಚಂದ್ರಿಕಾ ಮೇಸ್ತ್ರಿ ಪ್ರತಿನಿಧಿಸುವ ವಾರ್ಡ್ ನಂ. 56 ಹು-ಧಾ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ದುರ್ಗಮ್ಮ ಬಿಜವಾಡ ಅವರ ವಾರ್ಡ್ ನಂ. 69 ಹು-ಧಾ ಪೂರ್ವ ಕ್ಷೇತ್ರದಲ್ಲಿದೆ. ಇವೆರಡೂ ವಾರ್ಡ್​ಗಳು ಹುಬ್ಬಳ್ಳಿ ನಗರ ವ್ಯಾಪ್ತಿಗೆ ಸೇರಿದ್ದು. ಮೇಯರ್ ಸ್ಥಾನವನ್ನು ಹುಬ್ಬಳ್ಳಿಗೆ ನೀಡಿದರೆ ಉಪ ಮೇಯರ್ ಸ್ಥಾನ ಧಾರವಾಡ ನಗರಕ್ಕೆ ನೀಡುವುದು ವಾಡಿಕೆ.
‘‘ಹಾಲಿ ಮೇಯರ್-ಉಪ ಮೇಯರ್ ಅವಧಿ ಜೂ. 29ಕ್ಕೆ ಕೊನೆಗೊಳ್ಳುವ ಬಗ್ಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರ ಗಮನಕ್ಕೆ ಈಗಾಗಲೇ ತಂದಿದ್ದೇವೆ. ಅವರು ನೂತನ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿ ಪಡಿಸುತ್ತಾರೆ ಮತಾಧಿಕಾರ ಇರುವ ಒಟ್ಟು 89 ಜನಪ್ರತಿನಿಧಿಗಳ ಪಟ್ಟಿ ಕಳುಹಿಸಿದ್ದೇವೆ’’ ಎಂದು ಪಾಲಿಕೆಯ ಪರಿಷತ್ ಕಾರ್ಯದರ್ಶಿ ಉಮೇಶ ಸವಣೂರ ತಿಳಿಸಿದ್ದಾರೆ.
ಜುಲೈ 4ರಂದು ?
ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಚುನಾವಣೆ ಜುಲೈ 4ರಂದು ನಡೆಯುವ ಸಾಧ್ಯತೆಗಳಿವೆ. ಮತಾಧಿಕಾರ ಹೊಂದಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಇನ್ನಿತರ ಜನಪ್ರತಿನಿಧಿಗಳ ಲಭ್ಯತೆಯನ್ನು ಪರಿಗಣಿಸಿ ಈ ದಿನವನ್ನು ನಿಗದಿಪಡಿಸುವುದು ಸೂಕ್ತವೆಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.