ಧಾರವಾಡ: ಸಾಹಿತಿ ರಾಘವೇಂದ್ರ ಪಾಟೀಲರು 75ರ ಹರೆಯದಲ್ಲೂ ಅವರ ಸಾಹಿತ್ಯದಲ್ಲಿ ಕಥೆ, ಕಾವ್ಯದ ಪ್ರಮೇಯ, ಪ್ರೀತಿ, ಒಲವು ಮತ್ತು ಆಸಕ್ತಿ ಇನ್ನೂ ಇದೆ ಎಂದು ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಬಣ್ಣಿಸಿದರು.
ಸಾಹಿತಿ ರಾಘವೇಂದ್ರ ಪಾಟೀಲರಿಗೆ 75 ವರ್ಷಗಳು ತುಂಬಿದ ಪ್ರಯುಕ್ತ ಇಲ್ಲಿನ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಣಿಶಾಸ್ತç ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ ರಾಘವೇಂದ್ರ ಪಾಟೀಲರು ತಮ್ಮ ಜೀವನ ಹಾಗೂ ಸಾಹಿತ್ಯವನ್ನು ಸಮನಾಗಿ ತೂಗಿಸಿಕೊಂಡು ಬಂದಿದ್ದಾರೆ. ಅವರು ಸಾಹಿತಿಯೂ ಹೌದು. ವಿಜ್ಞಾನಿಯೂ ಹೌದು. ಮಧ್ಯೆದಲ್ಲಿ ಆಧ್ಯಾತ್ಮವನ್ನೂ ಹೊಂದಿದ್ದಾರೆ. ಅಧ್ಯಾತ್ಮದ ದೀಪದ ಬೆಳಕು ಅವರ ಸಾಹಿತ್ಯ ಮತ್ತು ವಿಜ್ಞಾನವನ್ನು ತೆಗೆದುಕೊಂಡು ಹೋಗುತ್ತಿದೆ ಎಂದರು.
ಪತ್ರಕರ್ತ ಜೋಗಿ ಅವರು, ರಾಘವೇಂದ್ರ ಪಾಟೀಲ ಅವರ ಬೆಳ್ಳಕ್ಕಿಗಳ ಲೋಕದಲ್ಲಿ, ತೇರು ಹಾಗೂ ಜೀವ ಸ್ಪರ್ಶ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಡಾ.ರಾಘವೇಂದ್ರ ಪಾಟೀಲರ ಜೀವನಕ್ಕೆ 75 ವರ್ಷ. ಅವರ ಬರಹದ ಹಾಗೂ ಸಾಂಸಾರಿಕ ಜೀವನಕ್ಕೆ 50 ವರ್ಷ. ಈಗಲೂ ಅವರಲ್ಲಿ ಸಾಕಷ್ಟು ಜೀವಕಳೆ ಇದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ದುರ್ಗದ ಮಲ್ಲಾಡಿ ಹಳ್ಳಿಯಲ್ಲಿಯ ಅನಾಥ ಸೇವಾಶ್ರಮ ಇಂದು ಖ್ಯಾತಿ ಪಡೆಯಲು ಕಾರಣರಾದವರು ರಾಘವೇಂದ್ರ ಪಾಟೀಲ ಸಹ ಒಬ್ಬರು. ಅವರ ಕಾರ್ಯ ಇಂದಿನ ತಲೆಮಾರಿಗೂ ಪ್ರಸ್ತುತ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿದರು. ಹಿರಿಯರಾದ ಪ್ರೊ. ದುಷ್ಯಂತ ನಾಡಗೌಡ, ಹರ್ಷ ಡಂಬಳ, ಡಾ.ಶಶಿಧರ ತೋಡಕರ, ಡಾ. ಎಂ.ಜಿ. ಹೆಗಡೆ ಇದ್ದರು.
ರಾಘವೇಂದ್ರ ಪಾಟೀಲ ಹಾಗೂ ಅವರ ಪತ್ನಿ ಜಯಶ್ರೀ ಅವರನ್ನು ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಬಳಿಕ ರಾಘವೇಂದ್ರ ಪಾಟೀಲರ ಸಾಹಿತ್ಯ ಕುರಿತು ಗೋಷ್ಠಿಗಳು ನಡೆದವು. ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿನಂದನಾ ಪರ ನುಡಿ ಹೇಳಿದರು. ಡಾ. ಶ್ರೀನಿವಾಸ ವಾಡಪ್ಪಿ ಇದ್ದರು.