ಸಾಂದರ್ಭಿಕ ಚಿತ್ರ 
ಧಾರವಾಡ

50 ಲಕ್ಷ ರೂ., 1 ಎಕರೆ ಜಮೀನು ಬೇಡಿಕೆ: lokayukt

ಮಂಜುನಾಥ ಗದಗಿನ
ಧಾರವಾಡ: ಜಮೀನಿನ ‘ಬ’ ಖರಾಬು ಬದಲಾವಣೆ ಮಾಡಿಕೊಡಲು 50 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಂಜುನಾಥ ಅರಳಿಕಟ್ಟಿ ಎಂಬುವವರ ಜಮೀನಿನ ‘ಬ’ ಖರಾಬು ಬದಲಾವಣೆ ಮಾಡಿಕೊಡಲು ತಹಸೀಲ್ದಾರ್ ಸಚ್ಚಿದಾನಂದ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರೊಂದಿಗೆ ಒಂದು ಎಕರೆ ಜಮೀನನ್ನೂ ಕೇಳಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತ ದೂರು ಆಧರಿಸಿ ಧಾರವಾಡದ ಕೆಸಿಡಿ ಮೈದಾನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ. ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ. ತಹಸೀಲ್ದಾರ್ ಸಚ್ಚಿದಾನಂದ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ತಹಸೀಲ್ದಾರ್‌ವೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಮೊದಲ ಪ್ರಕರಣ ಇದಾಗಿದೆ.